ADVERTISEMENT

ಕೊಳ್ಳೇಗಾಲ: ತರಾತುರಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 5:53 IST
Last Updated 20 ಮಾರ್ಚ್ 2023, 5:53 IST
   

ಕೊಳ್ಳೇಗಾಲ (ಚಾಮರಾಜನಗರ): ಕಾಮಗಾರಿ ಪೂರ್ಣಗೊಳ್ಳದಿದ್ದರೂ, ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಉಲ್ಲಂಘಿಸಿ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು, ನಾಲ್ವರು ಬಿಜೆಪಿ, ನಾಲ್ವರು ಪಕ್ಷೇತರರು ಮತ್ತು ಇಬ್ಬರು ಬಿಎಸ್ಪಿ ಸದಸ್ಯರು ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂವಿಧಾನದ ಪ್ರತಿ ಹಾಗೂ ವಿವಿಧ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಸದಸ್ಯರು, 'ಶಾಸಕ ಎನ್.ಮಹೇಶ್ ಅವರು ನಗರಸಭೆಯ ಗಮನಕ್ಕೆ ತಾರದೇ, ಸದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಉದ್ಘಾಟನೆ ಸಮಾರಂಭ ಹಮ್ಮಿಕೊಂಡಿದ್ದಾರೆ. ಇದರಿಂದ ನಮ್ಮ ಹಕ್ಕು ಚ್ಯುತಿಯಾಗಿದೆ' ಎಂದು ಆರೋಪಿಸಿದರು.

₹22.70 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ‌ನಿರ್ಮಿಸಲಾಗಿದ್ದು, ಕಾಮಗಾರಿ ಶುರುವಾಗಿ ಐದೂವರೆ ವರ್ಷಗಳ ಬಳಿಕ ಬಹುತೇಕ ಪೂರ್ಣಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ADVERTISEMENT

ಹಳೆ ಬಸ್ ನಿಲ್ದಾಣದಲ್ಲಿದ್ದ 51 ಹಳೆಯ ಮಳಿಗೆಗಳನ್ನು ತೆರವುಗೊಳಿಸಿಲ್ಲ. ಆ ಜಾಗದಲ್ಲಿ ಖಾಸಗಿ ಬಸ್ ಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು.

ಅಲ್ಲಿ ಕಾಮಗಾರಿ ಮುಗಿಯದೇ ಇರುವುದರಿಂದ ಈಗಲೇ ಉದ್ಘಾಟನೆ ಮಾಡಬಾರದು ಎಂದು ಸದಸ್ಯರು ಆಗ್ರಹಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಸಚಿವರ ಸಂಧಾನ ಯತ್ನ ವಿಫಲ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸದಸ್ಯರನ್ನು ಮನವೊಲಿಸುವ ಯತ್ನ ನಡೆಸಿದರು.

'ಸಾರ್ವಜನಿಕರ ಕಾರ್ಯಕ್ರಮ ಎಲ್ಲರೂ ಸೇರಿ ನಿಲ್ದಾಣವನ್ನು ಉದ್ಘಾಟಿಸೋಣ ಬನ್ನಿ' ಎಂದು ಕರೆದರು. ಇದಕ್ಕೆ ಒಪ್ಪದ ಸದಸ್ಯರು, 'ನಮಗೆ ಅವಮಾನವಾಗಿದೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉದ್ಘಾಟನೆ ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರು ಪಟ್ಟು ಬಿಡದೇ ಇದ್ದುದರಿಂದ ಸಚಿವರು ವಾಪಸ್ ಆದರು.

ನಂತರ ನಗರಸಭೆ ಸದಸ್ಯರು ಅಂಬೇಡ್ಕರ್ ಪ್ರತಿಮೆ ಬಳಿಗೆ ತೆರಳಿ ಪ್ರತಿಭಟನೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.