ಕೊಳ್ಳೇಗಾಲ: ಮಹದೇಶ್ವರ ಬೆಟ್ಟಕ್ಕೆ ಸುಮಾರು 6 ತಾಸುಗಳವರೆಗೆ ಬಸ್‌ಗಳು ಬಾರದಿರುವುದನ್ನು ಖಂಡಿಸಿ ನೂರಾರು ಪ್ರಯಾಣಿಕರು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ತೆರಳಲು ನೂರಾರು ಮಂದಿ, ನಗರದ ಬಸವೇಶ್ವರ ಮಿಲ್ ಸಮೀಪವಿರುವ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಗಂಟೆಗಳು ಕಳೆದರೂ ಬೆಟ್ಟಕ್ಕೆ ಹೋಗುವ ಬಸ್‌ಗಳು ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಭಕ್ತರು ರಸ್ತೆ ತಡೆ ನಡೆಸಿದರು.
ಹಬ್ಬ, ಜಾತ್ರೆ, ವಿಶೇಷ ಪೂಜೆ ಸಂದರ್ಭದಲ್ಲಿ ಬೆಟ್ಟಕ್ಕೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು. ಆದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುವುದರಿಂದ ಭಕ್ತರು ಹಾಗೂ ಪ್ರಯಾಣಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಬಳಿಕ, ಬೆಟ್ಟಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದರಿಂದ ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ಮದ್ದೂರಿನ ಶಶಿ, ಮಲ್ಲಯ್ಯ, ರಾಜಣ್ಣ, ಬೆಂಗಳೂರಿನ ಮಂಟಯ್ಯ, ರಾಮನಗರದ ಕಿಟ್ಟಿ, ಚನ್ನಪಟ್ಟಣದ ಕುಮಾರ, ರಾಜಮ್ಮ, ಸಿದ್ದಮ್ಮ, ಚಂದ್ರಮ್ಮ, ರಾಧಾ, ಚಿನ್ನಮ್ಮ, ಪಾರ್ವತಿ, ಮಾದೇವಮ್ಮ, ಪುಟ್ಟರಾಜು, ಮಹೇಂದ್ರ, ರಂಗರಾಜು, ಶಶಿಕುಮಾರ್, ರಾಜಶೇಖರ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.