
ಕೊಳ್ಳೇಗಾಲ: ನಗರದ ಗುಂಡಿ ಬಿದ್ದ ರಸ್ತೆಗಳ ದುರಸ್ತಿಪಡಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಪದಾಧಿಕಾರಿಗಳು ರಸ್ತೆ ಗುಂಡಿಗಳಲ್ಲಿ ಗುರುವಾರ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಸರ್ಕಾರದ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಅವರಿಗೆ ಮನವಿ ಸಲ್ಲಿಸಿದರು.
ವೇದಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಯಾಜ್ ಕನ್ನಡಿಗ ಮಾತನಾಡಿ, ‘ಕೊಳ್ಳೇಗಾಲ ನಗರಸಭೆ ವ್ಯಾಪ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ನಗರ ಬೆಳೆದರೂ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್ ಹೆಚ್ಚಾಗಿದೆ. ಹಾಗಾಗಿ ಸಂಚರಿಸಲು ಯೋಗ್ಯವಿಲ್ಲ. ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ’ ಎಂದರು.
‘ಪ್ರವಾಸಿ ಮಂದಿರಕ್ಕೆ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಬರುತ್ತಾರೆ, ಆದರೆ ಪ್ರವಾಸಿ ಮಂದಿರ ಸಮೀಪದಲ್ಲೇ ಹಳ್ಳಗಳು ಸೃಷ್ಟಿಯಾಗಿವೆ. ಈ ಬಗ್ಗೆ ಯಾರೂ ಗಮನಹರಿಸಿಲ್ಲ. ಆರ್‌ಎಂಸಿ ತರಕಾರಿ ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿ ದೊಡ್ಡದಾಗಿ ಹಳ್ಳ ಒಂದು ಕೆರೆಯಂತೆ ನಿರ್ಮಾಣವಾಗಿದೆ ಇದರ ಬಗ್ಗೆ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರಸ್ತೆಯಲ್ಲಿ ಹಳ್ಳ ಬಿದ್ದರೂ ತಾಲ್ಲೂಕು ಮಟ್ಟದ ಅಧಿಕಾರಿಗಳೆ ಹೊಣೆಯಾಗಬೇಕು. ಹಳ್ಳ ಮುಚ್ಚದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರ ಭಾವಚಿತ್ರಕ್ಕೆ ಮಸಿ ಬಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಕರವೇ ಮಹಿಳಾ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ, ಗೌರವಾಧ್ಯಕ್ಷ ಲಿಂಗರಾಜು, ನಿಸಾರ್ ಅಹಮದ್, ಇದ್ರಿಸ್ ಪಾಷ, ಮಹದೇವ ಪ್ರಸಾದ್, ಉಪಾಧ್ಯಕ್ಷ ಮೂರ್ತಿ ಶಾಸ್ತ್ರಿ, ಶಶಿ, ಇಫ್ರಾಜ್ ಭಾಷಾ, ಮೈನುದ್ದೀನ್, ಮುಬಾರಕ್, ಸುಂದರ್ ಶಾಸ್ತ್ರಿ, ಕವಿತಾ, ರೈತ ಸಂಘದ ರಾಮಕೃಷ್ಣ, ಸ್ವಾಮಿ, ನವೀನ್, ಸುರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.