ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 13:52 IST
Last Updated 23 ಜನವರಿ 2021, 13:52 IST

ಚಾಮರಾಜನಗರ: ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಆರ್.ಧ್ರುವನಾರಾಯಣ ಅವರನ್ನು ಜಿಲ್ಲೆಯ ಬೆಂಬಲಿಗರು ಸನ್ಮಾನಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿರುವ ಧ್ರುವನಾರಾಯಣ ಅವರ ನಿವಾಸಕ್ಕೆ ತೆರಳಿದ ತಂಡ ಸನ್ಮಾನಿಸಿ ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ರವಿಕುಮಾರ್‌ ಅವರು, ‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಧ್ರುವನಾರಾಯಣ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ’ ಎಂದರು.

ADVERTISEMENT

ಸಂಸದರಾಗಿ, ಶಾಸಕರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿ ದೇಶದಲ್ಲಿ ಉತ್ತಮ ಸಂಸದಪಟುವಾಗಿ ಕ್ಷೇತ್ರದಲ್ಲಿ ಹಾಗೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದ ಧ್ರುವನಾರಾಯಣ ಅವರನ್ನು ಗುರುತಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಅವರು ಇನ್ನೂ ಉನ್ನತ ಹುದ್ದೆ ಅಲಂಕರಿಸಲಿ’ ಎಂದು ಆಶಿಸಿದರು.

ಪಕ್ಷ ಕಟ್ಟುವೆ:ಸನ್ಮಾನ ಸ್ವೀಕರಿಸಿ ಮಾತನಾಡಿದ ಧ್ರುವನಾರಾಯಣ ಅವರು, ‘ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಹಾಗೂ ಮುಖಂಡರ ಶಿಫಾರಸಿನ ಮೇರೆಗೆ ಸೋನಿಯಾ ಗಾಂಧಿಯವರು ತಮ್ಮ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಯುವ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಜ್ಯ ನಾಯಕರ ಸಲಹೆ ಪಡೆದುಕೊಂಡು ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಶಕ್ತಿ ತುಂಬುವ ಮೂಲಕ ಮುಂದಿ ದಿನಗಳಲ್ಲಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ತರಲು ಶ್ರಮಿಸುತ್ತೇನೆ’ ಎಂದರು.

ಮುಖಂಡರಾದ ಬಿ.ಶಾಂತಮಲ್ಲಪ್ಪ, ಸಿ.ಮಹದೇವಪ್ಪ, ವಿ.ಪ್ರಭುಸ್ವಾಮಿ, ಪುರುಷೋತ್ತಮ್, ಶಾಂತು, ರಾಘು, ಬಾಬು, ಶಿವಕುಮಾರ್, ಮಹದೇವಯ್ಯ, ಚೆನ್ನಬಸವಯ್ಯ, ನಾಗರಾಜು,ಗ್ರಾ.ಪಂ.ಸದಸ್ಯರಾದ ನಾರಾಯಣ್‌ನಾಯಕ, ಗುರುಸ್ವಾಮಿ, ನಾಗರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.