ADVERTISEMENT

ಸಾಧನೆ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಕಾಶ್‌ ಶ್ರಮ

ಮೇಲುಕಾಮನಹಳ್ಳಿ: ರಾಜ್ಯ, ಜಿಲ್ಲಾಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಭಾಗಿ

ಮಲ್ಲೇಶ ಎಂ.
Published 18 ಜುಲೈ 2019, 6:09 IST
Last Updated 18 ಜುಲೈ 2019, 6:09 IST
ಕಬಡ್ಡಿ ತರಬೇತಿ ಪಡೆಯುತ್ತಿರುವ ಮಕ್ಕಳು
ಕಬಡ್ಡಿ ತರಬೇತಿ ಪಡೆಯುತ್ತಿರುವ ಮಕ್ಕಳು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮೇಲುಕಾಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.

ಇದರ ಹಿಂದೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಕಾಶ್ ಅವರ ಶ್ರಮವಿದೆ. ಶಾಲಾ, ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಶಿವಪ್ರಕಾಶ್‌ ಅವರಿಗೆ ಹೇಳಿಕೊಳ್ಳುವ ಸಾಧನೆ ಮಾಡಲು ಆಗಲಿಲ್ಲ. ಆ ಕೊರತೆಯನ್ನು ತಮ್ಮ ಶಾಲೆಯ ಮಕ್ಕಳ ಮೂಲಕ ನೀಗಿಸುತ್ತಿದ್ದಾರೆ. ಮಕ್ಕಳಿಗೆ ಕಠಿಣ ತರಬೇತಿ ನೀಡಿ ಅವರು ಜಿಲ್ಲೆ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲಾ ತಂಡಗಳು 2017–18ರಲ್ಲಿ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮತ್ತು 2018–19ರಲ್ಲಿ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ ಅಡೆತಡೆ ಓಟ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಅಲ್ಲದೆ, ಶಾಲೆಯ ಮಕ್ಕಳು ವಿವಿಧ ಅಥ್ಲೆಟಿಕ್ಸ್‌, ಕೊಕ್ಕೊ ಪಂದ್ಯಗಳಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಗಳಿಸಿದ್ದಾರೆ.

ADVERTISEMENT

ನಿರಂತರ ಅಭ್ಯಾಸ: ಮೂರು ವರ್ಷಗಳಿಂದ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಶಿವಪ್ರಕಾಶ್‌ ಅವರು ನಿರಂತರ ಅಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ.

‘ವಸತಿ ಶಾಲೆಯಾದ್ದರಿಂದಮಕ್ಕಳಿಗೂ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಸಮಯ ಅಭ್ಯಾಸ ಮಾಡುವುದರಿಂದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಲು ನೆರವಾಗುತ್ತದೆ’ ಎಂದು ಹೇಳುತ್ತಾರೆ ಶಿವಪ್ರಕಾಶ್‌.

‘ನಾನು ಪ್ರಾಥಮಿಕ ಶಾಲೆಯಲ್ಲಿ ವಾಸಂಗ ಮಾಡುತ್ತಿದ್ದಾಗ ಕೊಕ್ಕೊ ಮತ್ತು ಕಬಡ್ಡಿಯಲ್ಲಿ ಹೆಚ್ಚು ಆಸಕ್ತಿ ಇತ್ತು. ಕಾಲೇಜಿನಲ್ಲಿ ಇದ್ದಾಗ ವಿಶ್ವವಿದ್ಯಾಲಯ ಮಟ್ಟದಲ್ಲೂ ಆಡಿದ್ದೇನೆ. ಆದರೆ,ರಾಜ್ಯಮಟ್ಟದ ಪಂದ್ಯಗಳಲ್ಲಿ ಆಡಿರಲಿಲ್ಲ’ ಎಂದು ಶಿವಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಶಾಲೆಗೆ ಮೂರು ವರ್ಷಗಳ ಹಿಂದೆ ಬಂದಾಗ ಮಕ್ಕಳಿಗೆ ಕ್ರೀಡೆಯಲ್ಲಿರುವ ಆಸಕ್ತಿಯನ್ನು ಗುರುತಿಸಿದೆ. ಅವರಿಗೆ ಸೂಕ್ತ ತರಬೇತಿ ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ ಎಂಬುದು ಮನದಟ್ಟಾಯಿತು. ಆ ಬಳಿಕ ಮಕ್ಕಳಿಗೆ ಕ್ರೀಡಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾ ಸಿಬ್ಬಂದಿ ಮತ್ತು ಪ್ರಾಂಶುಪಾಲರ ಸಹಕಾರದಿಂದ ಸೂಕ್ತ ತರಬೇತಿ ನೀಡಿದ ಪರಿಣಾಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ನಿಜಕ್ಕೂ ಇದು ಹೆಮ್ಮೆಯ ವಿಚಾರ’ ಎಂದು ಅವರು ಹೇಳಿದರು.

‘ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾ ತರಬೇತಿ ನೀಡುವುದರ ಜೊತೆಗೆ ಪಠ್ಯ ಚಟುವಟಿಕೆಗಳಿಗೂ ಹುರಿದುಂಬಿಸುತ್ತಾರೆ. ಅವರ ಸತತ ಮಾರ್ಗದರ್ಶನದಿಂದ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ’ ಎಂದುವಿದ್ಯಾರ್ಥಿಗಳಾದ ಮಿಶಾನ್ ಮತ್ತು ತೇಜ್‌ರಾಜ್ ತಿಳಿಸಿದರು.

‘ಶಿವಪ್ರಕಾಶ್‌ ಅವರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ನೀಡುತ್ತಿದ್ದಾರೆ. ಇತರ ಸಿಬ್ಬಂದಿಯ ಸಹಕಾರವೂ ಉತ್ತಮವಾಗಿದೆ. ಹೀಗಾಗಿ ಮಕ್ಕಳಿಗೆ ಕ್ರೀಡಾ ಸಾಧನೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ಶಾಲೆಯ ಪ್ರಾಂಶುಪಾಲ ವಿಲಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.