ADVERTISEMENT

ಕೆಎಸ್‌ಆರ್‌ಟಿಸಿ: 2 ವರ್ಷ ಬಳಿಕ ಮೊದಲ ಲಾಭ!

ಸಹಜ ಸ್ಥಿತಿಯತ್ತ ಸಾರಿಗೆ ಆದಾಯ, ನವೆಂಬರ್‌ನಲ್ಲಿ ಪ್ರತಿ ದಿನ ₹55 ಲಕ್ಷ ಸಂಗ್ರಹ

ಸೂರ್ಯನಾರಾಯಣ ವಿ
Published 7 ಡಿಸೆಂಬರ್ 2021, 16:32 IST
Last Updated 7 ಡಿಸೆಂಬರ್ 2021, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೋವಿಡ್‌ ಹಾವಳಿ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಚಾಮರಾಜನಗರದ ವಿಭಾಗವು ಕೊಂಚ ಲಾಭ ಕಂಡಿದೆ.

2019ರ ನವೆಂಬರ್‌ನಲ್ಲಿ ನಿಗಮಕ್ಕೆ ₹75 ಲಕ್ಷ ನಷ್ಟವಾಗಿತ್ತು. 2020ರ ಆರಂಭದಲ್ಲಿ ಕೋವಿಡ್‌ ಹಾವಳಿ ಆರಂಭವಾದ ಬಳಿಕ ಸಂಸ್ಥೆಯ ಆದಾಯದಲ್ಲಿ ಗಣನೀಯ ಇಳಿಕೆ ಕಂಡು ಬಂತು. ಬಳಿಕ ಲಾಕ್‌ಡೌನ್‌, ಎರಡನೇ ಅಲೆ, ಸಿಬ್ಬಂದಿ ಮುಷ್ಕರ ಸೇರಿದಂತೆ ಒಂದೂವರೆ ವರ್ಷದಲ್ಲಿ ನಿಗಮದ ವಹಿವಾಟು ಸರಾಗವಾಗಿ ನಡೆದಿರಲಿಲ್ಲ.

ಎರಡನೇ ಅಲೆ ಕಡಿಮೆಯಾದ ಬಳಿಕವೂ ಎರಡು ಮೂರು ತಿಂಗಳ ಕಾಲ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಹಂತ ಹಂತವಾಗಿ ಆದಾಯ ಚೇತರಿಸುತ್ತಾ ಬಂದು ನವೆಂಬರ್‌ನಲ್ಲಿ ಪ್ರತಿ ದಿನದ ಆದಾಯ ಬಹುತೇಕ ಕೋವಿಡ್‌ಗಿಂತಲೂ ಮುಂಚಿನ ಸ್ಥಿತಿಗೆ ತಲುಪಿದೆ ಎಂದು ಹೇಳುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ADVERTISEMENT

ಕೋವಿಡ್‌ ಪೂರ್ವದಲ್ಲಿ ಚಾಮರಾಜನಗರ ವಿಭಾಗದಲ್ಲಿ ಪ್ರತಿ ದಿನ ₹55 ಲಕ್ಷದಿಂದ ₹60 ಲಕ್ಷದವರೆಗೆ ಸಂಗ್ರಹವಾಗುತ್ತಿತ್ತು. ಸರಾಸರಿ ₹58 ಲಕ್ಷ ಸಂಗ್ರಹವಾಗುತ್ತಿತ್ತು.

‘ನಮ್ಮ ವಿಭಾಗದಲ್ಲಿ 509 ಬಸ್‌ಗಳಿವೆ. ಸದ್ಯ 460 ಬಸ್‌ಗಳು ಓಡಾಡುತ್ತಿವೆ. ಇಡೀ ವಿಭಾಗದ ನಿರ್ವಹಣೆ ವೆಚ್ಚ ಪ್ರತಿ ತಿಂಗಳು ₹16 ಕೋಟಿಯಾಗುತ್ತದೆ. ಪ್ರತಿ ದಿನ ₹60 ಲಕ್ಷ ಸಂಗ್ರಹವಾದರೆ, ತಿಂಗಳ ಅಂತ್ಯದಲ್ಲಿ ಒಟ್ಟಾರೆ ಸಂಗ್ರಹ ಖರ್ಚಿಗಿಂತ ಹೆಚ್ಚಾಗುತ್ತದೆ.ಈ ಬಾರಿ ನವೆಂಬರ್‌ನಲ್ಲಿ ಪ್ರತಿ ದಿನ ಸರಾಸರಿ ₹55 ಲಕ್ಷ ಆದಾಯ ಬಂದಿದೆ. ಅಂದರೆ ನಿಗಮದ ಕಾರ್ಯಾಚರಣೆ ಕೋವಿಡ್‌ ಪೂರ್ವ ಸ್ಥಿತಿಗೆ ಬಹುತೇಕ ಬಂದಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ಹೇಳಿದರು.

ಹಬ್ಬ, ಸಮಾರಂಭಗಳು ಕಾರಣ: ‘ನವೆಂಬರ್‌ ತಿಂಗಳಲ್ಲಿ ದೀಪಾವಳಿ, ಕಾರ್ತಿಕ ಮಾಸ, ಮದುವೆ, ಗೃಹ ಪ್ರವೇಶ ಸೇರಿದಂತೆ ಸಾಕಷ್ಟು ಶುಭ ಸಮಾರಂಭಗಳು ಇದ್ದವು. ಜನರ ಓಡಾಟ ಹೆಚ್ಚಿತ್ತು. ಬಾಡಿಗೆಗಳೂ ಸಿಗುತ್ತಿದ್ದವು. ಮಹದೇಶ್ವರ ಬೆಟ್ಟದ ಕಾರ್ತಿಕ ಜಾತ್ರಾ ಸಮಯದಲ್ಲಿ ₹75 ಲಕ್ಷ ಆದಾಯ ಬಂದಿದೆ. ಶಾಲಾ ಕಾಲೇಜುಗಳು ಆರಂಭಗೊಂಡಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಬಳಸಲು ಆರಂಭಿಸಿದ್ದರಿಂದಲೂ ದಿನದ ಆದಾಯ ಹೆಚ್ಚಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಸೆಪ್ಟೆಂಬರ್‌ನಲ್ಲಿ ನಮಗೆ ₹5 ಕೋಟಿ ನಷ್ಟ ಆಗಿತ್ತು. ಅಕ್ಟೋಬರ್‌ನಲ್ಲಿ ₹2 ಕೋಟಿ ನಷ್ಟವಾಗಿದೆ. ನವೆಂಬರ್‌ನಲ್ಲಿ ಈಗಿನ ಲೆಕ್ಕಾಚಾರದ ಪ್ರಕಾರ ಖರ್ಚು ಕಳೆದು ₹30 ಲಕ್ಷ ಲಾಭವಾಗಿದೆ. ಡಿಸೆಂಬರ್‌ ತಿಂಗಳ ಮೊದಲ ಒಂದುವಾರದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಪ್ರತಿ ದಿನ ಸರಾಸರಿ ₹50 ಲಕ್ಷ ಆದಾಯ ಬರುತ್ತಿದೆ’ ಎಂದು ಶ್ರೀನಿವಾಸ ಅವರು ಮಾಹಿತಿ ನೀಡಿದರು.

ಗ್ರಾಮೀಣ ಭಾಗಗಳಿಂದಲೂ ಬೇಡಿಕೆ

ಲಾಕ್‌ಡೌನ್‌ ತೆರವುಗೊಂಡ ನಂತರವೂ ಜಿಲ್ಲೆಯಲ್ಲಿ ಎಲ್ಲ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಗ್ರಾಮೀಣ ಭಾಗದಲ್ಲಿ ಬಸ್‌ಗಳು ಮೊದಲಿನಷ್ಟು ಓಡಾಡುತ್ತಿಲ್ಲ. ಇದು ಕೆಎಸ್‌ಆರ್‌ಟಿಸಿಗೆ ವರವಾಗಿ ಪರಿಣಮಿಸಿದೆ. ಗ್ರಾಮೀಣ ಭಾಗಗಳಿಂದಲೂ ಬಸ್‌ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಬರುತ್ತಿದೆ.

‘ಗ್ರಾಮೀಣ ಭಾಗದ ಹೊಸ ಮಾರ್ಗಗಳಿಗೆ ಬಸ್‌ ಹಾಕಿದ್ದೇವೆ. ಸ್ಪಂದನೆ ಉತ್ತಮವಾಗಿದೆ. ಹೆಚ್ಚುವರಿ ಬಸ್‌ಗಳನ್ನು ಹಾಕುವಂತೆ ಬೇಡಿಕೆಯೂ ಬರುತ್ತಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಹಾಕುತ್ತಿದ್ದೇವೆ’ ಎಂದು ಶ್ರೀನಿವಾಸ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.