ADVERTISEMENT

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಚಾಮರಾಜನಗರ ಕುರುಬ ಸಮಾಜದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 11:24 IST
Last Updated 19 ಡಿಸೆಂಬರ್ 2021, 11:24 IST
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದನ್ನು ಖಂಡಿಸಿ ಚಾಮರಾಜನಗರ ತಾಲ್ಲೂಕು ಕುರುಬರ ಸಂಘದ ಆಶ್ರಯದಲ್ಲಿ ಸಮುದಾಯದವರು ಪ್ರತಿಭಟನೆ ನಡೆಸಿದರು
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದನ್ನು ಖಂಡಿಸಿ ಚಾಮರಾಜನಗರ ತಾಲ್ಲೂಕು ಕುರುಬರ ಸಂಘದ ಆಶ್ರಯದಲ್ಲಿ ಸಮುದಾಯದವರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಬೆಳಗಾವಿಯಲ್ಲಿ ವೀರ ಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿತಾಲ್ಲೂಕು ಕುರುಬರ ಸಂಘದ ಆಶ್ರಯದಲ್ಲಿ ಸಮುದಾಯದವರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಉದ್ಯಾನದ ಬಳಿ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಮಹಾರಾಷ್ಟ್ರ ಸರ್ಕಾರ, ಎಂಇಎಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು

ಜಿಲ್ಲಾಡಳಿತ ಮುಂಭಾಗ ಧರಣಿ ಕುಳಿತ ಪ್ರತಿಭಟನಕಾರರು, ‘ಪ್ರತಿಮೆ ವಿರೂಪಗೊಳಿಸಿ ರಾಯಣ್ಣ ಅವರಿಗೆ ಅವಮಾನ ಮಾಡಿರುವ ಎಂಇಎಸ್‌ ಕಾರ್ಯಕರ್ತರನ್ನು ಬಂಧಿಸಿ, ಅವರನ್ನು ಗಡಿಪಾರು ಮಾಡಬೇಕು. ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಬೆಳಗಾವಿಯ ಸುವರ್ಣಸೌಧ ಮುಂಭಾಗ ಪ್ರತಿಷ್ಠಾಪನೆ ಮಾಡಬೇಕು’ ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿ.ಎನ್‌.ಬಾಲರಾಜು, ಉಪಾಧ್ಯಕ್ಷ ಆರ್‌.ಉಮೇಶ್‌, ಮಾದಾಪುರ ರವಿಕುಮಾರ್‌, ಶಿವರಾಮು, ಅಮಚವಾಡಿ ಕುಮಾರ್‌ ಹಾಗೂ ಇತರರು, ‘ದೇಶಕ್ಕಾಗಿ ಹೋರಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಎಂಇಎಸ್‌ ಸಂಘಟನೆಯವರು ಬೆಳಗಾವಿಯಲ್ಲಿ ವಿರೂಪಗೊಳಿಸುವ ಮೂಲಕ ಅಪ್ರತಿಮ ದೇಶಭಕ್ತನಿಗೆ ಅಪಮಾನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಈ ಕೂಡಲೇ ತಪ್ಪಿತಸ್ಥರ ವಿರದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಎಂಇಎಸ್‌ನ ಪುಡಾರಿಗಳು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಪುಂಡರನ್ನು ಬಂಧಿಸಿ, ಗಡಿಪಾರು ಮಾಡಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಹೋರಾಟ ವಿಸ್ತರಿಸಲಾಗುವುದು’ ಎಂದು ಹೇಳಿದರು.

ಮುಖಂಡರಾದ ಬಸಪ್ಪನ ಪಾಳ್ಯ ನಾಗರಾಜು, ಕುದೇರು ಲಿಂಗಣ್ಣ, ಕಾಡಹಳ್ಳಿ ಸುಬ್ಬೇಗೌಡ, ಸೊತ್ತನಹುಂಡಿ ಸೋಮಣ್ಣ, ಶಿವಣ್ಣ, ರಾಮಸಮುದ್ರ ಶಂಕರ್‌, ಶಿವಪುರ ಕುಮಾರ್‌, ಮುತ್ತಿಗೆ ಮೂರ್ತಿ, ಪ್ರಭು ಮಹದೇವಸ್ವಾಮಿ, ಕೆ.ಕೆ.ಹುಂಡ ಕುಮಾರ್‌, ಪಣ್ಯದಹುಂಡಿ ಸತೀಶ, ಕಾಳನಹುಂಡಿ ಸತೀಶ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.