ಚಾಮರಾಜನಗರ: ‘ಕುವೆಂಪು ಕ್ರಾಂತಿಕಾರಿ ಲೇಖಕ. ಗುಡಿ ಮಸೀದಿ, ಚರ್ಚ್‌ಗಳನ್ನು ಬಿಟ್ಟು ಹೊರಗಡೆ ಬನ್ನಿ; ಒಂದೇ ಧರ್ಮಕ್ಕೆ ಸಿಲುಕಬೇಡಿ ವಿಶ್ವಮಾನವರಾಗಿ ಎಂಬ ಸಂದೇಶ ಕೊಟ್ಟಂತಹ ಧೀಮಂತ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್.ಜಯದೇವ ಶುಕ್ರವಾರ ತಿಳಿಸಿದರು.
ನಗರದ ದೀನಬಂಧು ಶಾಲೆಯಲ್ಲಿ ಚಾಮರಾಜನಗರ ಅಭ್ಯಾಸಿ ಟ್ರಸ್ಟ್, ದೀನಬಂಧು ಸಂಸ್ಥೆಯ ಆಶ್ರಯದಲ್ಲಿ ವಿಶ್ವಮಾನವ ದಿನಾಚರಣೆ ಅಂಗವಾಗಿ ಅಭ್ಯಾಸಿ ಮಕ್ಕಳ ವಾರಾಂತ್ಯ ರಂಗಶಾಲೆ ಪ್ರಸ್ತುತಪಡಿಸಿದ ‘ನನ್ನ ಗೋಪಾಲ’ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುವೆಂಪು ಅವರು ಕ್ರಾಂತಿಕಾರಿಯಾಗಿದ್ದರು. ಕ್ರಾಂತಿಕಾರಿ ಎಂದರೆ ಕತ್ತಿ ಹಿಡಿಯುವುದು ಎಂದಲ್ಲ. ಅವರು ತಮ್ಮ ಲೇಖನಿ ಮೂಲಕ ಕ್ರಾಂತಿ ಮಾಡಿದವರು. ಒಬ್ಬ ಕವಿ ಒಳ್ಳೆಯ ವಿಚಾರವನ್ನು, ಎಲ್ಲರನ್ನೂ ಒಳಗೊಳ್ಳುವಂತಹದ್ದನ್ನು ಬರೆದರೆ ಆತ ದೊಡ್ಡ ಕ್ರಾಂತಿಯನ್ನೇ ಮಾಡಿದಂತೆ’ ಎಂದು ಅವರು ಬಣ್ಣಿಸಿದರು.
‘ಕುವೆಂಪು ಅವರು ಚಿಕ್ಕ ಮಕ್ಕಳಿಗಾಗಿ ಕಿಂದರಜೋಗಿಯಂತಹ ಸಾಹಿತ್ಯವನ್ನು ಬರೆದಿದ್ದಾರೆ. ದೊಡ್ಡವರಿಗೆ ಬೇಕಾಗುವಂತಹ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಮನಸ್ಸು ವಿಶಾಲವಾಗಿರುತ್ತದೆ. ಅದು ಜಾತಿ, ಧರ್ಮ, ಕೋಮು ಇತ್ಯಾದಿ ಸಂಕುಚಿತ ಭಾವನೆಗಳಿಗೆ ಸಿಲುಕದೆ ಇದ್ದಾಗ ಮಕ್ಕಳು ವಿಶ್ವಮಾನವರಾಗುತ್ತಾರೆ’ ಎಂದು ಜಯದೇವ ಹೇಳಿದರು.
‘ಅವರಿಗೆ ಕೊನೆಯವರೆಗೂ ವಿಶ್ವಮಾನವ ಸಂದೇಶದ ಬಗ್ಗೆ ಪ್ರೀತಿ ಇತ್ತು. ಅವರು ನಿಸರ್ಗದ ಕವಿ ಕೂಡ ಆಗಿದ್ದರು’ ಎಂದು ಜಯದೇವ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಭ್ಯಾಸಿ ಟ್ಟಸ್ಟ್‌ನ ಸಂಸ್ಥಾಪಕ ಕಿರಣ್ ಗಿರ್ಗಿ ಸೇರಿದಂತೆ ದೀನಬಂಧು ಶಾಲೆಯ ಮಕ್ಕಳು ಇದ್ದರು.
ಅಭ್ಯಾಸಿ ಮಕ್ಕಳ ವಾರಾಂತ್ಯ ರಂಗಶಾಲೆ ಕಲಾವಿದರು ಪ್ರದರ್ಶಿಸಿದ ‘ನನ್ನ ಗೋಪಾಲ’ ನಾಟಕ ಗಮನಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.