
ಚಾಮರಾಜನಗರ: ನಾಡು, ನುಡಿ, ಸಂಸ್ಕೃತಿ ಹಾಗೂ ಭಾಷೆಯ ಬೆಳವಣಿಗೆಗೆ ರಾಷ್ಟ್ರಕವಿ ಕುವೆಂಪು ಕೊಡುಗೆ ಅಪಾರ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ವಿಶ್ವಮಾನವ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಶಾಸಕರು, ಕನ್ನಡ ಭಾಷೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕುವೆಂಪು ಕನ್ನಡದ ಶ್ರೇಷ್ಠ ಹಾಗೂ ಅಗ್ರಗಣ್ಯ ಕವಿಯಾಗಿದ್ದಾರೆ.
ಕಥೆ, ಕವನ, ನಾಟಕ, ಕಾದಂಬರಿ, ವಿಮರ್ಶಾತ್ಮಕ ಲೇಖನಗಳನ್ನು ನೀಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಪದ್ಮ ವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗರೂ ಆಗಿದ್ದಾರೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಜಗತ್ತಿಗೆ ಮಾದರಿ ಎಂದರು.
ವಿಪರ್ಯಾಸ ಎಂದರೆ ಈಚೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕುಸಿಯುತ್ತಿದೆ. ಇಂಗ್ಲಿಷ್ ಕಲಿಯದಿದ್ದರೆ ಜೀವನವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಮಾತೃಭಾಷೆ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ ‘ಕುವೆಂಪು ಅವರ ವಿಶ್ವ ಮಾನವ ಸಂದೇಶ ದಾರಿದೀಪವಾಗಲಿ, ಅವರ ಸಾಹಿತ್ಯ ಸರಳ ಹಾಗೂ ಅರ್ಥಗರ್ಭಿತವಾಗಿದ್ದು ಸಮಾಜ ಹೇಗೆ ಬದುಕಬೇಕು ಎಂಬುದನ್ನು ಅಕ್ಷರಗಳ ಮೂಲಕ ತಿಳಿ ಹೇಳಿದ್ದಾರೆ. ಕುವೆಂಪು ಅವರ ಆದರ್ಶಗಳು, ವಿಚಾರಧಾರೆಗಳನ್ನು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಮಾತನಾಡಿ, ದೇಶಕಂಡ ಶ್ರೇಷ್ಠ ಕವಿ ಹಾಗೂ ಮಾನವತಾವಾದಿ ಆಗಿರುವ ಕುವೆಂಪು ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ್ದಾರೆ. ಸಮಸಮಾಜ ಪರಿಕಲ್ಪನೆ ವಿಶ್ವ ಮಾನವ ಸಂದೇಶದ ಮೂಲವಾಗಿದೆ ಎಂದರು.
ಚಿಂತಕ ಹಾಗೂ ಶ್ರೇಷ್ಠ ಬರಹಗಾರರಾದ ಕುವೆಂಪು ಸಾಹಿತ್ಯ ಕೃಷಿಯ ಮೂಲಕ ಓದುಗರಿಗೆ ಉತ್ತಮ ಕೃತಿಗಳನ್ನು ರಚಿಸಿ ಕೊಟ್ಟಿದ್ದಾರೆ. ಅವರ ಸಾಹಿತ್ಯ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಅವರ ಬರಹಗಳಲ್ಲಿ ರೈತರ ಹಾಗೂ ದೀನ ದಲಿತರ ಪರವಾದ ದನಿ ಕಾಣಬಹುದು. ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ತಂದುಕೊಟ್ಟ ಮಹಾನ್ ಚೇತನ ಕುವೆಂಪು ಎಂದರು.
ಕನ್ನಡ ಸಾಹಿತ್ಯಕ್ಕೆ ಕುವೆಂಪು 83 ಕೃತಿಗಳನ್ನು ನೀಡಿದ್ದಾರೆ. ಮಲೆನಾಡಿನ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಮಲೆಗಳಲ್ಲಿ ಮದುಮಗಳು, ಕಾನೂರ ಹೆಗ್ಗಡತಿ ಕಾದಂಬರಿಗಳು ಜನರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಯುಗದ ಕವಿಯಾಗಿ, ಜಗದ ಕವಿಯಾಗಿ ಕುವೆಂಪು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಮನುಷ್ಯರ ನಡುವಿನ ಸಂಬಂಧಗಳನ್ನು ಬೆಸೆದಿದ್ದಾರೆ ಎಂದರು.
ಶಾಲಾ ಕಾಲೇಜುಗಳಲ್ಲಿ ‘ನನ್ನ ನೆಚ್ಚಿನ ಸಾಹಿತಿ’ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು. ಜಿಲ್ಲೆಯ ಕಲಾವಿದರಿಗೆ ಮಾಸಾಶನ ಮಂಜೂರು ಪ್ರತಿಯನ್ನು ನೀಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಸಂವಿಧಾನ ಪೀಠಿಕೆ ಬೋಧಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ರಾಜು, ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ, ಮುಖಂಡರಾದ ಮಹೇಶ್‍ಗೌಡ ಹಾಗೂ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಕುವೆಂಪು ಸಾಹಿತ್ಯ ಬದುಕಿಗೆ ದಾರಿ ದೀಪವಾಗಲಿ ಕುವೆಂಪು ಜಗದ ಕವಿ, ಯುಗದ ಕವಿ ಮಲೆನಾಡ ಸೊಗಡನ್ನು ಜಗತ್ತಿಗೆ ಪಸರಿಸಿದ ಕುವೆಂಪು
ಕುವೆಂಪು ಚಿಂತನೆಗಳು ಸಾರ್ವಕಾಲಿಕ ವೈಚಾರಿಕ ಚಿಂತನೆಗಳ ಮೂಲಕ ಜಾತಿ-ಧರ್ಮಗಳ ನಡುವಿನ ಅಂತರ ತಗ್ಗಿಸಲು ಕುವೆಂಪು ಶ್ರಮಿಸಿದ್ದಾರೆ. ವಿಶ್ವ ಮಾನವನಾಗಲು ವಿದ್ಯೆ ಪ್ರಮುಖ ಅಸ್ತ್ರ ಎಂಬ ಸತ್ಯವನ್ನು ಸಮಾಜಕ್ಕೆ ತಿಳಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಪ್ರತಿ ಪಾತ್ರವೂ ಮಹತ್ವದ್ದಾಗಿದೆ. ಮನುಜ ಮತ-ವಿಶ್ವಪಥ ಸರ್ವೋದಯ ಪರಿಕಲ್ಪನೆಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಪ್ರಾಂಶುಪಾಲ ಮಹದೇವಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.