ADVERTISEMENT

ಸೌಲಭ್ಯಗಳ ನಿರೀಕ್ಷೆಯಲ್ಲಿ ವ್ಯಾಪಾರಿಗಳು

ಯಳಂದೂರು: ಮನೆಗಳ ನಡುವೆ ಕಂತೆ ಬಿಚ್ಚಿಕೊಳ್ಳುವ ಸಂತೆ, ಶೌಚಾಲಯ, ಕುಡಿಯುವ ನೀರು ಇಲ್ಲ

ನಾ.ಮಂಜುನಾಥ ಸ್ವಾಮಿ
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST
ಯಳಂದೂರು ಪಟ್ಟಣದ 3ನೇ ವಾರ್ಡ್‌ನ ಛತ್ರದ ಬೀದಿಯ ಸಂತೆಯಲ್ಲಿ ಪ್ಲಾಸ್ಟಿಕ್ ಗುಡಾರದಡಿ ವ್ಯಾಪಾರ ಮಾಡುತ್ತಿರುವ ಮಾರಾಟಗಾರರು
ಯಳಂದೂರು ಪಟ್ಟಣದ 3ನೇ ವಾರ್ಡ್‌ನ ಛತ್ರದ ಬೀದಿಯ ಸಂತೆಯಲ್ಲಿ ಪ್ಲಾಸ್ಟಿಕ್ ಗುಡಾರದಡಿ ವ್ಯಾಪಾರ ಮಾಡುತ್ತಿರುವ ಮಾರಾಟಗಾರರು   

ಯಳಂದೂರು:ಪಟ್ಟಣದ ನಡುವಿನ ಛತ್ರದ ಬೀದಿಯಲ್ಲಿ ಪ್ರತಿ ಭಾನುವಾರದ ಸಂತೆ ಕಳೆಗಟ್ಟುತ್ತದೆ. ಆದರೆ, ಮಾರಾಟಗಾರರು ಮತ್ತು ಗ್ರಾಹಕರ ಸ್ನೇಹಿ ಅಲ್ಲದ ಪರಿಸರದಲ್ಲಿ ವಸ್ತುಗಳನ್ನು ಕೊಳ್ಳಬೇಕಾದ ಸ್ಥಿತಿ ಇಲ್ಲಿದೆ. ಬಿಸಿಲು ಮತ್ತು ಮಳೆ ಸುರಿದರೆ ಸಮೀಪದ ಮನೆಗಳ ನೆರಳಿನಲ್ಲಿ ಕಾಯಿ ಪಲ್ಲೆಗಳನ್ನು ಹರಡಿಕೊಂಡು ಮಾರಾಟ ಮಾಡಬೇಕಿದೆ.

ಸಂತೆ ನಡೆಯವ 3ನೇ ವಾರ್ಡ್‌ನಲ್ಲಿ ಪಟ್ಟಣ ಪಂಚಾಯಿತಿ 15 ಮಳಿಗೆಗಳನ್ನು ನಿರ್ಮಿಸಿದೆ. ಆದರೆ, ಇದು ಬಳಕೆಯಾಗುತ್ತಿಲ್ಲ. ಸಂತೆ ಮೈದಾನದಲ್ಲಿ ಕೆಲವು ಕಡೆ ಮಾತ್ರ ನೆರಳು ಕಲ್ಪಿಸಲಾಗಿದೆ. ಉಳಿದೆಡೆ ವ್ಯಾಪಾರಿಗಳು ಪ್ಲಾಸ್ಟಿಕ್ ಸೂರು ಕಟ್ಟಿಕೊಂಡು ವ್ಯಾಪಾರ ಮಾಡುತ್ತಾರೆ. ಆಷಾಢದ ಮಳೆ, ಗಾಳಿಗೆ ಇಲ್ಲಿನ ಟೆಂಟ್‌ಗಳು ಹಾರುತ್ತವೆ.

ಸಮೀಪದಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ತಂಗುದಾಣ ಇಲ್ಲ. ಶನಿವಾರ ತಂದ ಸರಕುಗಳನ್ನು ಮನೆ ಬದಿ ಪೇರಿಸಿಟ್ಟು ಕಾಯಬೇಕು. ಬಿಸಿಲಿಗೆ ತರಕಾರಿ ಇಟ್ಟರೆ ಬಾಡುತ್ತದೆ. ಇದರಿಂದ ಬೆಲೆ ಮತ್ತು ಬೇಡಿಕೆ ಇಳಿಯುತ್ತದೆ ಎಂದು ದೂರುತ್ತಾರೆ ಮಾರಾಟಗಾರರು.

ADVERTISEMENT

‘ನೆರಳಿನ ಆಸರೆಗಾಗಿ ಮನೆಗಳ ಮುಂದೆ ವ್ಯಾಪಾರ ಮಾಡಬೇಕು. ರಸ್ತೆಯ ನಡುವಿನ ಮರಗಳ ತಳದಲ್ಲಿ ಒಣ ಮೀನು, ಸಿಗಡಿ ವ್ಯಾಪಾರಿಗಳು ನೆರೆಯುತ್ತಾರೆ. ಅಲ್ಪ ಮಳೆಗೆ ಸಿಲುಕಿದರೂ ಇವು ಹಾಳಾಗುತ್ತವೆ’ ಎಂದು ಮೈಸೂರು ಸೋಮಪ್ಪ ಆರೋಪಿಸಿದರು.

ವಾರದ ಸಂತೆಯ ದಿನ, ಗಲಾಟೆಗೆ ಬೇಸತ್ತ ನಿವಾಸಿಗಳು ಬೇಗ ಹೊರ ಹೋಗಬೇಕಾದ ಸ್ಥಿತಿ ಇದೆ. ವಯಸ್ಸಾದವರು ಇದ್ದಲ್ಲಿ ಮನೆಯಲ್ಲಿ ಉಳಿಯುವುದು ಅನಿವಾರ್ಯ. ‌ಕೆಲವರು ಸಂತೆ ನಡುವೆ ದ್ವಿಚಕ್ರ ವಾಹನ ನುಗ್ಗಿಸುತ್ತಾರೆ. ಇದು ಮಹಿಳೆಯರು ಮತ್ತು ವೃದ್ಧರ ಓಡಾಟಕ್ಕೆ ಕಿರಿಕಿರಿ ಉಂಟು ಮಾಡುತ್ತದೆ. ರಸ್ತೆ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಬಳಕೆಗೆ ಸಿಗುವುದಿಲ್ಲ.

‘ಸಂತೆಗೆ ಜಿಲ್ಲೆಯ ವಿವಿಧೆಡೆಯಿಂದ ಬೇಸಾಯಗಾರರು ತರಕಾರಿ ತರುತ್ತಾರೆ. ಪಟ್ಟಣದ ನಿವಾಸಿಗಳು ಮಾತ್ರವಲ್ಲದೆ, ಸುತ್ತಮುತ್ತಲ ಗ್ರಾಮಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಬರುವ ಜನ ವಸ್ತುಗಳನ್ನು ಖರೀದಿಸುತ್ತಾರೆ. ದಶಕಗಳ ಹಿಂದೆ ಜಹಗೀರ್‌ದಾರ್ ಬಂಗಲೆ ಮುಂಭಾಗ ನಡೆಯುತ್ತಿದ್ದ ಸಂತೆಯನ್ನು ಹೊಳೆ ಅಂಚಿಗೆ ಸ್ಥಳಾಂತರಿಸಲಾಯಿತು. ಹಾಗಾಗಿ, ಮುಖ್ಯ ರಸ್ತೆಯಿಂದಲೇ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಮುಂದಾಗುತ್ತಾರೆ’ ಎನ್ನುತ್ತಾರೆ ಪಟ್ಟಣದ ಮಂಜುನಾಥ.

‘ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಟ್ಟಣ ಪಂಚಾಯಿತಿ ಕರ ವಸೂಲು ಮಾಡುವುದನ್ನು ಬಿಟ್ಟಿಲ್ಲ. ನಿಗದಿತ ಸ್ಥಳದಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿಲ್ಲ. ಮಳೆಯಾದರೆ ಸಂತೆ ನೀರು ಪಾಲಾಗುತ್ತದೆ. ಗ್ರಾಹಕರು ಅನಾರೋಗ್ಯಕರ ಪರಿಸರದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಗ್ರಾಹಕ ಗೂಳಿಪುರ ಮಹದೇವಪ್ಪ.

ವ್ಯಾಪಾರಿಗಳು ಏನಂತಾರೆ?

* ಬೀದಿ ಬದಿಯಲ್ಲಿ ತರಕಾರಿ ಅಂಗಡಿಗಳಿಗೆ ಸಾಕಷ್ಟು ಜಾಗ ಸಿಗುತ್ತಿಲ್ಲ. ವ್ಯಾಪಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂಲ ಸಂತೆ ನಡೆಯುವ ಸ್ಥಳದಲ್ಲೇ ಎಲ್ಲ ವ್ಯಾಪಾರಿಗಳು ಮಾರಾಟ ಮಾಡಬೇಕು. ನೀರು ಮತ್ತು ನೆರಳು ಕಲ್ಪಿಸಿದರೆ ಮನೆಗಳ ಮುಂಭಾಗ ವ್ಯಾಪಾರ ಮಾಡುವುದು ತಪ್ಪುತ್ತದೆ
–ಮಹದೇವಶೆಟ್ಟಿ, ತರಕಾರಿ ವ್ಯಾಪಾರಿ ಗಣಿಗನೂರು

* ಸಂತೆಯ ನಡುವೆ ದ್ವಿಚಕ್ರ ವಾಹನ ಸವಾರರು ಓಡಾಡುವುದರಿಂದ ವ್ಯಾಪಾರ ಮಾಡುವುದು ಕಷ್ಟ. ಗಿರಾಕಿ ನೆಮ್ಮದಿಯಿಂದ ನಿಂತು ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚು ತರಕಾರಿ ತಂದರೆ ರಾಶಿ ಹಾಕಲು ಸ್ಥಳ ಸಿಗುವುದಿಲ್ಲ
–ಮಾದಮ್ಮ, ಸೊಪ್ಪಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.