ಸಂತೇಮರಹಳ್ಳಿ: ಇಲ್ಲಿನ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಗೆ ಮೂಲ ಸೌಕರ್ಯಗಳಿಲ್ಲದೇ ವ್ಯಾಪಾರಸ್ಥರು ಹಾಗೂ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು 25 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಇಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಗೆ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಿಂದ ಹೆಚ್ಚು ವ್ಯಾಪಾರಸ್ಥರು ಬರುತ್ತಿದ್ದು, ಪ್ರಸಿದ್ಧಿ ಪಡೆದಿದೆ. ಇಲ್ಲಿ ವ್ಯಾಪಾರಸ್ಥರ ಅನುಕೂಲಕ್ಕೆ ತಕ್ಕಂತೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ.
ಸಂತೆಯಲ್ಲಿ ತರಕಾರಿ, ದಿನಸಿ, ಹಣ್ಣುಗಳು, ತೆಂಗಿನ ಕಾಯಿ, ಆಡು, ಕುರಿ ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳು ಮಾರಾಟವಾಗುತ್ತಿವೆ. ಮಂಗಳವಾರ ನಡೆಯುವ ಈ ಸಂತೆಗೆ ಹಿಂದಿನ ರಾತ್ರಿ ಸೋಮವಾರವೇ ವ್ಯಾಪಾರಸ್ಥರು ಆಗಮಿಸಿ ತಮ್ಮ ವ್ಯಾಪಾರದ ವಸ್ತುಗಳೊಂದಿಗೆ ತಂಗುತ್ತಾರೆ. ರಾತ್ರಿ ಸಮಯಲ್ಲಿ ಉಳಿದುಕೊಳ್ಳುವಾಗ ಕೊಠಡಿಗಳ ವ್ಯವಸ್ಥೆ ಇಲ್ಲ. ಜತೆಗೆ ದಾಸ್ತಾನಿಗೆ ಗೋದಾಮು ವ್ಯವಸ್ಥೆ ಉತ್ತಮವಾಗಿಲ್ಲ. ಬಯಲಿನಲ್ಲಿಯೇ ವ್ಯಾಪಾರಸ್ಥರು ಮಲಗಬೇಕಾಗಿದೆ. ಬೀದಿ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದ ವ್ಯಾಪಾರಸ್ಥರು ಹಾವು ಚೇಳುಗಳ ಕಾಟ ಅನುಭವಿಸಬೇಕಾಗಿದೆ.
ಮಾರುಕಟ್ಟೆಗೆ ಬರುವ ಎಲ್ಲ ವ್ಯಾಪಾರಸ್ಥರಿಗೂ ಸರಿಯಾದ ಗೋದಾಮು ನಿರ್ಮಿಸಿಲ್ಲ. ಇದರಿಂದ ಕೆಲವು ವ್ಯಾಪಾರಸ್ಥರು ಬಿಸಿಲಿನಲ್ಲಿ ವ್ಯಾಪಾರ ಮಾಡಬೇಕಾಗಿದೆ. ಜತೆಗೆ ಮಳೆಗಾಲದಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಮಾರುಕಟ್ಟೆಯ ಪ್ರಾಂಗಣದಲ್ಲಿ ತರಕಾರಿ ವ್ಯಾಪಾರಕ್ಕೆ ನಿರ್ಮಿಸಿರುವ ಮಳಿಗೆಯ ಸುತ್ತಲೂ ಕಳೆ ಗಿಡಗಳು ವ್ಯಾಪಕವಾಗಿ ಬೆಳೆದುಕೊಂಡಿದೆ. ಇದರ ಸನಿಹದಲ್ಲಿಯೇ ವ್ಯಾಪಾರ ನಡೆಸಲಾಗುತ್ತಿದೆ. ವ್ಯಾಪಾರ ನಡೆಯುವ ಸ್ಥಳದ ಸುತ್ತಲೂ ಸ್ವಚ್ಛತೆ ಇಲ್ಲದೇ ಅನೈರ್ಮಲ್ಯ ಉಂಟಾಗಿದೆ. ವಿಶಾಲವಾದ ಸ್ಥಳಾವಕಾಶವಿದ್ದರೂ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿಲ್ಲ.
ಪ್ರಾಂಗಣದಲ್ಲಿ ಚರಂಡಿ ವ್ಯವಸ್ಥೆ ಉತ್ತಮವಾಗಿಲ್ಲ. ಎಷ್ಟೋ ವರ್ಷಗಳ ಹಿಂದೆ ನಿರ್ಮಿಸಿರುವ ಚರಂಡಿ ಅವ್ಯವಸ್ಥೆಯಾಗಿದೆ. ಹೂಳು ತುಂಬಿಕೊಂಡಿರುವ ಪರಿಣಾಮ ಮಳೆ ಬಂದಾಗ ವ್ಯಾಪಾರ ಮಾಡುವ ಸ್ಥಳಗಳಿಗೂ ಮಳೆ ನೀರು ನುಗ್ಗುತ್ತದೆ. ರಸ್ತೆಯು ಉತ್ತಮವಾಗಿಲ್ಲದ ಕಾರಣ ಸಂತೆಗೆ ಬರುವ ಗ್ರಾಹಕರು ಸಂಚರಿಸಲು ತೊಂದರೆ ಅನುಭವಿಸಬೇಕಾಗಿದೆ. ಈ ರಸ್ತೆಯ ಸನಿಹದಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. ವಾಹನಗಳು ವ್ಯಾಪಾರದ ಸಾಮಾನುಗಳನ್ನು ಇಳಿಸುವಾಗ ಹಾಗೂ ಖರೀದಿಸಿ ತೆಗೆದುಕೊಂಡು ಹೋಗುವಾಗ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಮಾರುಕಟ್ಟೆ ಪ್ರಾಂಗಣದ ಒಳಗಡೆ ಹೋಬಳಿಯಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ದಿನಸಿ ಸರಬರಾಜು ಮಾಡುವ ಕರ್ನಾಟಕ ಆಹಾರ ಸರಬರಾಜಿನ ಗೋದಾಮು ಇದೆ. ಇಲ್ಲಿ ದಿನಸಿ ತುಂಬಿದ ಲಾರಿಗಳು ಹೆಚ್ಚಾಗಿ ಸಂಚರಿಸುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಎಷ್ಟೋ ವರ್ಷಗಳ ಹಿಂದೆ ಹಾಕಿದ ಜಲ್ಲಿಕಲ್ಲುಗಳು ಕಣ್ಮರೆಯಾಗಿವೆ. ರಸ್ತೆಯಲ್ಲಿ ಹಳ್ಳ–ಕೊರಕಲುಗಳು ಉಂಟಾಗಿವೆ. ಇದರಿಂದ ವ್ಯಾಪಾರದ ಪ್ರಮುಖ ಕೇಂದ್ರವಾಗಿರುವ ಸಂತೆಯಲ್ಲಿ ರಸ್ತೆಯನ್ನು ಉತ್ತಮವಾಗಿ ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಸಂತೆಯ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಭೆಯಲ್ಲಿ ಚರ್ಚಿಸಿ ಮುಖ್ಯ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಂದ ಮಂಜೂರಾಗಿ ಬಂದ ತಕ್ಷಣ ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದುಸೋಮೇಶ್ ಎಪಿಎಂಸಿ ಅಧ್ಯಕ್ಷ
ವ್ಯಾಪಾರ ಮಾಡುವಾಗ ಮಳೆ–ಗಾಳಿಯಿಂದ ತೊಂದರೆ ಅನುಭವಿಸುತ್ತಿದ್ದೇವೆ. ಜತೆಗೆ ರಸ್ತೆಯು ಉತ್ತಮವಾಗಿಲ್ಲ. ಇದರಿಂದ ವ್ಯಾಪಾರ ಮಾಡಲು ತೊಂದರೆಯಾಗುತ್ತದೆ. ವ್ಯಾಪಾರಸ್ಥರಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕುಮಹದೇವಸ್ವಾಮಿ ಶಿವಣ್ಣ ವ್ಯಾಪಾರಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.