ADVERTISEMENT

ಚೆಕ್‌ಪೋಸ್ಟ್‌ ಸಿಬ್ಬಂದಿಗಿಲ್ಲ ಮೂಲಸೌಕರ್ಯ

‍ಪಾಲಾರ್‌ ಚೆಕ್‌ಪೋಸ್ಟ್‌ ಸಂಜೆ 5ರ ನಂತರ ಆರೋಗ್ಯ ಸಿಬ್ಬಂದಿ ಇಲ್ಲ, ಸ್ಥಳೀಯರ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:29 IST
Last Updated 30 ಮಾರ್ಚ್ 2020, 15:29 IST
ಪಾಲಾರ್‌ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಸಿಬ್ಬಂದಿ
ಪಾಲಾರ್‌ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಸಿಬ್ಬಂದಿ   

ಚಾಮರಾಜನಗರ/ಮಹದೇಶ್ವರ ಬೆಟ್ಟ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಪ್ರಯತ್ನವಾಗಿ ಅಂತರರಾಜ್ಯ, ಅಂತರಜಿಲ್ಲೆ ವಾಹನಗಳ ಸಂಚಾರವನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಆರಂಭಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮೂಲಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಆರು ಅಂತರರಾಜ್ಯ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಪಾಳಿ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಂದಾಯ ಇಲಾಖೆಯ ಉಸ್ತುವಾರಿಯಲ್ಲಿ ಬರುವ ಈ ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿಸುವ ವಾಹನಗಳನ್ನು ತಡೆದು ವಿಚಾರಿಸುವುದು, ಆರೋಗ್ಯ ತಪಾಸಣೆ ಮಾಡುವುದು ಸಿಬ್ಬಂದಿಯ ಕೆಲಸ. ಒಂದು ಪಾಳಿಯಲ್ಲಿ ಸಿಬ್ಬಂದಿ ಎಂಟು ಗಂಟೆಗಳ ಕರ್ತವ್ಯ ನಿರ್ವಹಿಸಬೇಕು.

ಆದರೆ, ಕರ್ತವ್ಯನಿರತ ಸಿಬ್ಬಂದಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿಲ್ಲ. ಸ್ವತಃ ಅವರೇ ತಮ್ಮ ಜೇಬಿನಿಂದ ಖರ್ಚು ಮಾಡಿಕೊಂಡು ಊಟ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಗಡಿ ಭಾಗಗಳಲ್ಲಿ ಸರಿಯಾದ ಊಟವೂ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಸಿಬ್ಬಂದಿ.

ADVERTISEMENT

‘ನೋಡೆಲ್‌ ಅಧಿಕಾರಿಗಳು ಮತ್ತು ಚೆಕ್‌ಪೋಸ್ಟ್‌ನ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಸ್ಥಳಕ್ಕೆ ಬಂದು ಫೋಟೊ ತೆಗೆದುಕೊಂಡು ಹೋಗುತ್ತಾರೆ. ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಗಮನ ನೀಡುತ್ತಿಲ್ಲ’ ಎಂದು ಖಾಸಗಿಯಾಗಿ ದೂರುತ್ತಾರೆ ಸಿಬ್ಬಂದಿ.

ಆರೋಗ್ಯ ಸಿಬ್ಬಂದಿ ಇಲ್ಲ: ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಪಾಲಾರ್‌ನಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಸಂಜೆ 5 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯದಲ್ಲಿ ಇರುವುದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

‘ದೇಶದಾದ್ಯಂತ ದಿಗ್ಬಂಧನ ಹೇರಿರುವುದರಿಂದ ಹೊರ ರಾಜ್ಯಗಳಿಗೆ ಹೋಗಿರುವ ಜನರು ತಮ್ಮ ಊರುಗಳಿಗೆ ವಾಪಸ್‌ ಆಗುತ್ತಿದ್ದಾರೆ. ಅಂತಹವರನ್ನು ಚೆಕ್‌ಪೋಸ್ಟ್‌ಗಳಲ್ಲಿ ಸರಿಯಾಗಿ ತಪಾಸಣೆ ಮಾಡಬೇಕು. ಆದರೆ, ಇಲ್ಲಿ ಆರೋಗ್ಯ ಸಿಬ್ಬಂದಿ ಸರಿಯಾಗಿ ಇಲ್ಲ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ಮಾತ್ರ ವೈದ್ಯರು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸುತಿದ್ದಾರೆ. ನಂತರ ವಾಪಸ್‌ ಆಗುತ್ತಿದ್ದಾರೆ’ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚು ಓಡಾಟ: ಪಾಲಾರ್‌ ತಮಿಳುನಾಡಿಗೆ ಹೊಂದಿಕೊಂಡಿರುವುದರಿಂದ ತಮಿಳರು ಇಲ್ಲಿ ಹೆಚ್ಚು ಓಡಾಡಿಕೊಂಡಿರುತ್ತಾರೆ. ಗೋಪಿನಾಥಂ ಹಾಗೂ ಸುತ್ತಮುತ್ತಲಿನ ಜನರು ಆರೋಗ್ಯ ಸೇವೆಗಳಿಗಾಗಿ ತಮಿಳುನಾಡನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಜನರು ಗುಂಪು ಗುಂಪಾಗಿ ತಮಿಳುನಾಡಿನಿಂದ ಗೋಪಿನಾಥಂಗೆ ಬರುತ್ತಿರುತ್ತಾರೆ. ಹಾಗಾಗಿ, ಇಲ್ಲಿ ಹೆಚ್ಚು ಕಟ್ಟೆಚ್ಚರದ ಅಗತ್ಯವಿದೆ ಹಾಗಾಗಿ ಜಿಲ್ಲಾಡಳಿತ ಈ ಚೆಕ್‌ಪೋಸ್ಟ್‌ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂಬುದು ಅವರ ಒತ್ತಾಯ.

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ತಹಶೀಲ್ದಾರ್‌ ಬಸವರಾಜು ಅವರು, ‘ಚೆಕ್‌ಪೋಸ್ಟ್‌ನಲ್ಲಿ 24 ಗಂಟೆಗಳ ಕಾಲವೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪಂಚಾಯಿತಿ ವತಿಯಿಂದ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು. ಜೊತೆಗೆ, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ನೆರವು ಪಡೆದು ಬೆಟ್ಟದಿಂದ ಪಾಲಾರ್‌ವರೆಗೆ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ವಾಹನದ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಸೌಕರ್ಯ ಕಲ್ಪಿಸಲು ಕ್ರಮ: ಡಿಸಿ

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಸೋಮವಾರ ನಡೆಸಿದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿರುವ ಮೂಲಸೌಕರ್ಯ ಕೊರತೆಗಳ ಬಗ್ಗೆ ಗಮನ ಸೆಳೆಯಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಸಿಬ್ಬಂದಿಗೆ ಎಂಟು ಗಂಟೆಗಳ ಕರ್ತವ್ಯ ನಿಗದಿಪಡಿಸಲಾಗಿದೆ. ಊಟ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೂಲೆಹೊಳೆ ಸೇರಿದಂತೆ ಕೆಲವು ಚೆಕ್‌ಪೋಸ್ಟ್‌ಗಳಲ್ಲಿ ಅಡುಗೆ ಸಿದ್ಧಪಡಿಸಲು ಪಡಿತರವನ್ನೂ ಪೂರೈಸಲಾಗಿದೆ. ಎಲ್ಲಿಯಾದರೂ ಕೊರತೆ ಇದ್ದರೆ, ಅದಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.