ADVERTISEMENT

ಗುಂಡ್ಲುಪೇಟೆ: ಗುತ್ತಿಗೆ ನೀಡಿದ್ದ ಜಮೀನು ಅಕ್ರಮ ಪರಭಾರೆ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:50 IST
Last Updated 20 ಡಿಸೆಂಬರ್ 2025, 6:50 IST
   

ಗುಂಡ್ಲುಪೇಟೆ: ತಾಲ್ಲೂಕಿನ ಮಂಗಲ ಗ್ರಾಮದ ಬೋವಿ ಸಮುದಾಯದ 9 ರೈತರು ವರ್ಷದ ಗುತ್ತಿಗೆ ಆಧಾರದಲ್ಲಿ ಕೊಟ್ಟಿದ್ದ ಜಮೀನನ್ನು ಬೆಂಗಳೂರು ಮೂಲದ ಉದ್ಯಮಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಭೋವಿ ಸಮಾಜದ ರತ್ನಮ್ಮ ದೂರಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಮಂಗಲ ಮತ್ತು ಜಕ್ಕಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರ 1977-78ರಲ್ಲಿ ಸಾಗುವಳಿ ರೂಪದಲ್ಲಿ ಮಂಜೂರು ಮಾಡಿತ್ತು. ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಖಾಲಿ ಪತ್ರಕ್ಕೆ ಎಬ್ಬೆಟ್ಟಿನ ಮುದ್ರೆ ಹಾಕಿಸಿಕೊಂಡು ಜಮೀನನ್ನು ಅವರ ಹೆಸರಿಗೆ ಖಾತೆ ಮಾಡಿಕೊಂಡು ನಂತರ ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ಜಮೀನು ಖರೀದಿಸಿರುವ ವ್ಯಕ್ತಿಗಳು ಭೂಮಿ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಉದ್ಯಮಿಗಳಿಂದ ಉಳಿದ ಹಣ ಪಡೆದು ಜಮೀನು ಬಿಟ್ಟುಕೊಡುವಂತೆ ಸೂಚಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ADVERTISEMENT

ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿನಾಯಕ್ ಮಾತನಾಡಿ, ಮಂಗಲ1977-78ರಲ್ಲಿ ಸರ್ವೆ ನಂ-116, 117, 118 ಮತ್ತು 121ರಲ್ಲಿ ಚಿನ್ನರಾಜು, ಚಿಕ್ಕಗೋವಿಂದಯ್ಯ, ಕುಮಾರ ಭೋವಿ, ನಟರಾಜು, ಹೊನ್ನ ಭೋವಿ, ಮಾರಭೋವಿ ಸೇರಿದಂತೆ 9 ಮಂದಿಗೆ ಜಮೀನನ್ನು ಮಂಜೂರು ಮಾಡಲಾಗಿದೆ. ಮಧ್ಯವರ್ತಿಗಳು ವರ್ಷದ ಗುತ್ತಿಗೆ ರೂಪದಲ್ಲಿ ಉದ್ಯಮಿಯಿಂದ ರೈತರಿಗೆ ಹಣ ಕೊಡಿಸಿ, ಒಬ್ಬ ರೈತನ ಸಹಿ ಮಾತ್ರ ಪಡೆದು ಉಳಿದ ರೈತರ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಪಿಸಿಟಿಎಲ್ ಕಾಯ್ದೆ ಪ್ರಕಾರ ಎಸ್‌ಸಿ, ಎಸ್‌ಟಿ ಸಮುದಾಯದ ಜಮೀನು ಖರೀಸುವಂತಿಲ್ಲ ಎಂಬ ನಿಯಮ ಇದ್ದರೂ ಉಲ್ಲಂಘನೆಯಾಗಿದೆ. ಅನಕ್ಷರಸ್ಥರಾದ ಬೋವಿ ಜನಾಂಗದವರಿಂದ ಭೂಮಿ ಕಿತ್ತುಕೊಳ್ಳಲಾಗುತ್ತಿದ್ದು ಗುಂಡ್ಲುಪೇಟೆ ಪೊಲೀಸರು ಕೂಡ ಉದ್ಯಮಿಗಳ ಪರ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಉಪ ವಿಭಾಗಾಧಿಕಾರಿ ಮಧ್ಯ ಪ್ರವೇಶಿಸಿ ಬೋವಿ ಜನಾಂಗದವರಿಗೆ ಜಮೀನು ಮರಳಿ ಕೊಡಿಸಬೇಕು. ಇಲ್ಲವಾದರೆ ಡಿ.22ರಂದು ತಾಲ್ಲೂಕು ಕಚೇರಿ ಮುಂದೆ ರೈತರ ಜೊತೆಗೂಡಿ ಜಾರಕಿಹೊಳಿ ಬ್ರಿಗೇಡ್ ಹಾಗೂ ಇತರೆ ಸಂಘಟನೆಗಳ ಜೊತೆ ಉಪವಾಸ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೈತರಾದ ನಟರಾಜು, ಮಹೇಂದ್ರ, ಪಾಪಮ್ಮ, ಕುನ್ನಯ್ಯ, ಸುರೇಶ್, ನಾಗರಾಜು, ಕನಕರಾಜು, ಮಹೇಶ್, ಮುರುಗೇಶ್, ಮುಖಂಡರಾದ ಮಂಗಲ ಉಮೇಶ್, ರಮೇಶ್ ನಾಯಕ್, ಗಿರಿಜನ ಮುಖಂಡ ಮುದ್ದಪ್ಪ, ವೇಣು ಸಲಗಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.