ADVERTISEMENT

ಚಾಮರಾಜನಗರ: ತ್ರಿಭಾಷಾ ನೀತಿ ಕೈಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:26 IST
Last Updated 6 ಜುಲೈ 2025, 2:26 IST
ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು 
ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು    

ಚಾಮರಾಜನಗರ: ಶಿಕ್ಷಣ ವ್ಯವಸ್ಥೆಯಲ್ಲಿ ತ್ರಿಭಾಷಾ ನೀತಿ ಕೈಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ವತಿಯಿಂದ ಶನಿವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಮಂಜೇಶ್ ಎಚ್.ಎನ್ ಮಾತನಾಡಿ, ‘ರಾಜ್ಯ ಪಠ್ಯಕ್ರಮದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ, ಇಂಗ್ಲಿಷ್ ದ್ವಿತೀಯ ಭಾಷೆಯಾಗಿ, ಹಿಂದಿಯನ್ನು ಭಾಷೆಯಾಗಿ ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು ತೃತೀಯ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಹಿಂದಿ ಭಾಷೆ ಕಲಿಕೆಗೆ ಕರ್ನಾಟಕದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹಾಕಲಾಗುತ್ತಿದೆ. 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. 2025ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 1.2 ಲಕ್ಷ ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ. ಪರಿಣಾಮ ರಾಜ್ಯದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತ್ರಿಭಾಷಾ ಸೂತ್ರಕ್ಕೆ ಹಿಂದೆಯೇ ರಾಷ್ಟ್ರಕವಿ ಕುವೆಂಪು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಮತ್ತು ಭಾಷಿಕ ಅಸ್ಮಿತೆಯಲ್ಲಿ ನೆಲದ ನುಡಿಯಾದ ಕನ್ನಡ ಕೇಂದ್ರ ಸ್ಥಾನ ಹೊಂದಿರಬೇಕು, ಬದಲಾದ ಕಾಲಘಟ್ಟದಲ್ಲಿ ಜಾಗತಿಕ ವ್ಯವಹಾರ, ಉನ್ನತ ಶಿಕ್ಷಣ, ವೃತ್ತಿ ನಿರ್ವಹಣೆಗೆ ಇಂಗ್ಲಿಷ್ ಅಗತ್ಯವಾಗಿರುವುದರಿಂದ ಕಲಿಕೆಗೆ ಒತ್ತು ನೀಡಬೇಕು. ಆದರೆ, ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಿಲ್ಲದ, ಉದ್ಯೋಗವನ್ನೂ ನೀಡದ ಹಿಂದಿ ಭಾಷೆಯ ಕಡ್ಡಾಯ ಕಲಿಕೆಗೆ ಒತ್ತಡ ಸರಿಯಲ್ಲ. ತ್ರಿಭಾಷಾ ನೀತಿ ಕೈಬಿಟ್ಟು, ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮೀ ಮಾತನಾಡಿ, ‘ತಮಿಳುನಾಡಿನಲ್ಲಿ 1968ರಿಂದಲೇ ಹಿಂದಿ ಭಾಷೆ ತಿರಸ್ಕರಿಸಿ ತಮಿಳು ಮತ್ತು ಇಂಗ್ಲೀಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿ ಜಾರಿಗೆ ತರಲಾಗಿದೆ. ಈಚೆಗೆ ಮಹಾರಾಷ್ಟ್ರ ಸರ್ಕಾರ ಕೂಡ ತ್ರಿಭಾಷಾ ನೀತಿ ರದ್ದುಗೊಳಿಸಿ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ. ಕರ್ನಾಟಕದಲ್ಲೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ದ್ವಿಭಾಷಾ ನೀತಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪೇಶ್, ಮಹಿಳಾ ಘಟಕದ ಉಪಾಧ್ಯಕ್ಷೆ ಸಾಕಮ್ಮ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಹಂಡ್ರಹಳ್ಳಿ ಸಂತೋಷ್, ಉಪಾಧ್ಯಕ್ಷ ಸುಂದರ್ ರಾಮಸಮುದ್ರ, ಕಾರ್ಯದರ್ಶಿ ಶೋಭಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್, ಯಳಂದೂರು ಅಧ್ಯಕ್ಷ ರಮೇಶ್, ಕೊಳ್ಳೇಗಾಲ ಅಧ್ಯಕ್ಷ ಅಯಾಜ್ ಕನ್ನಡಿಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.