ADVERTISEMENT

ಕೊನೆ ಶ್ರಾವಣ ಶನಿವಾರ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ದೇವರ ದರ್ಶನ ಪಡೆದ ಅಪಾರ ಸಂಖ್ಯೆಯ ಭಕ್ತರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 2:49 IST
Last Updated 24 ಆಗಸ್ಟ್ 2025, 2:49 IST
ಶ್ರಾವಣ ಮಾಸದ ಕೊನೆಯ ಶನಿವಾರದ ಪ್ರಯುಕ್ತ ತಾಲ್ಲೂಕಿನ ಅಮಚವಾಡಿ-ಚನ್ನಪ್ಪನಪುರ ಗ್ರಾಮದ ಶ್ರೀಕ್ಷೇತ್ರ ಹೆಬ್ಬಾಳ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕೊಂಡೋತ್ಸವ ನಡೆಯಿತು
ಶ್ರಾವಣ ಮಾಸದ ಕೊನೆಯ ಶನಿವಾರದ ಪ್ರಯುಕ್ತ ತಾಲ್ಲೂಕಿನ ಅಮಚವಾಡಿ-ಚನ್ನಪ್ಪನಪುರ ಗ್ರಾಮದ ಶ್ರೀಕ್ಷೇತ್ರ ಹೆಬ್ಬಾಳ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕೊಂಡೋತ್ಸವ ನಡೆಯಿತು   

ಚಾಮರಾಜನಗರ: ಶ್ರಾವಣ ಮಾಸದ ಕೊನೆಯ ಶನಿವಾರದ ಪ್ರಯುಕ್ತ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ಗೃಹಿಣಿಯರು ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. 

ಕೊನೆಯ ಶ್ರಾವಣದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಾಮರಾಜನಗರ ತಾಲ್ಲೂಕಿನ ಅಮಚವಾಡಿ-ಚನ್ನಪ್ಪನಪುರ ಗ್ರಾಮದ ಶ್ರೀಕ್ಷೇತ್ರ ಹೆಬ್ಬಾಳ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕೊಂಡೋತ್ಸವ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ಲಕ್ಷ್ಮಿ ನಾರಾಯಣ ಸ್ಮರಣೆ:

ADVERTISEMENT

ಕೊಳ್ಳೇಗಾಲದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು. ಕಡೆಯ ಶ್ರಾವಣದಲ್ಲಿ ಪೌರ್ಣಮಿ ಹಾಗೂ ಅಮಾವಾಸ್ಯೆ ಬಂದಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇವರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ನೈವೇದ್ಯ ಸಮರ್ಪಣೆ ಹಾಗೂ ಮಹಾ ಮಂಗಳಾರತಿ ಪೂಜೆ ಸಲ್ಲಿಸಲಾಯಿತು.

ಸಂಜೆ ಅಮಾವಾಸ್ಯೆ ಪ್ರಯುಕ್ತ ಲಕ್ಷ್ಮಿ ನಾರಾಯಣ ಸ್ವಾಮಿಯನ್ನು ಹನುಮಂತ ವಾಹನದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಹಲವು ಗ್ರಾಮಗಳು, ಪಟ್ಟಣಗಳಿಂದ ಬಂದಿದ್ದ ಭಕ್ತರು ದೇವರ ಸ್ಮರಣೆ ಮಾಡಿ ಹೂ, ಹಣ್ಣು, ಕಾಯಿ ಸಮರ್ಪಿಸಿದರು. ಅರ್ಚಕ ಸುದರ್ಶನ್ ಭಟ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ನಗರದ ಮರಡಿ ಗುಡ್ಡದಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಪಲ್ಲಕ್ಕಿಯಲ್ಲಿ ರಂಗಧಾಮನ ಮೆರವಣಿಗೆ: 

ಯಳಂದೂರು ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಕೊನೆ ಶ್ರಾವಣ ಶನಿವಾರದ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

ಮುಂಜಾನೆ ಶ್ರಾವಣ ಬಹುಳ ಅಮಾವಾಸ್ಯೆ ಮಖ ನಕ್ಷತ್ರದಲ್ಲಿ ದೇವರಿಗೆ ನೈವೇದ್ಯ ಸಮರ್ಪಣೆ, ಮಹಾ ಮಂಗಳಾರತಿ, ಪಂಚಾಮೃತ ಅಭಿಷೇಕ ಮಾಡಲಾಯಿತು. ದೇಗುಲದ ಸುತ್ತ ತಳಿರು ತೋರಣಗಳ ಅಲಂಕಾರ ಮಾಡಲಾಗಿತ್ತು, ಭಕ್ತರು ಹಣ್ಣು ಕಾಯಿ ಪೂಜೆ ಮಾಡಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಮಧ್ಯಾಹ್ನ ರಂಗನಾಥನ ಗುಡಿಯ ಸುತ್ತಲೂ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತಲೂ ಮಂಗಳವಾದ್ಯದ ಸದ್ದಿನೊಂದಿಗೆ ಮೆರವಣಿಗೆ ಮಾಡಲಾಯಿತು. ಈ ಸಮಯದಲ್ಲಿ ದೇವರ ಬೆಳ್ಳಿ ದಂಡಕ ಹೊತ್ತ ಭಕ್ತರು ಗೋವಿಂದನಾಮ ಸ್ಮರಣೆ ಮಾಡಿದರು. ದಾಸರು ಶಂಖ ಜಾಗಟೆ ಬಾರಿಸಿ ಉತ್ಸವಕ್ಕೆ ಮೆರಗು ತಂದರು.

ದಾಸನ ಒಕ್ಕಲಿನ ಭಕ್ತರು ಅಕ್ಕಿ, ಕಜ್ಜಾಯ ಮತ್ತು ಪುರಿಯಿಂದ ತಯಾರಿಸಿದ ವಿಶೇಷ ಪ್ರಸಾದವನ್ನು ದೇವಾಲಯದ ಸುತ್ತ ಇಟ್ಟು, ರಂಗಧಾಮನ ಹರಕೆ ಒಪ್ಪಿಸಿದರು.  ದಾಸೋಹದಲ್ಲಿ ಸಂಜೆವರೆಗೂ ಅನ್ನ ಪ್ರಸಾದ ವಿತರಿಸಲಾಯಿತು. ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕ್ಷೇತ್ರಕ್ಕೆ ಬರಲು ಬಸ್‌ಗಳ ಸಂಚಾರ ಮಾಡಲಾಗಿತ್ತು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್ ಕುಮಾರ್ ತಿಳಿಸಿದರು.

ಕೊನೆಯ ಶ್ರಾವಣ ಮಾಸದ ಪೂಜೆಗೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದು ಕರ್ಪೂರ ಮತ್ತು ಧೂಪ ದೀಪ ಬೆಳಗಿ ಮಳೆ ಬೆಳೆಗೆ ಪ್ರಾರ್ಥನೆ ಸಲ್ಲಿಸಿದರು ಎಂದು ಪಾರುಪತ್ತೆಗಾರ ರಾಜು ಹೇಳಿದರು.

ವಿಶೇಷ ಪೂಜೆ

ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಡೆ ಶ್ರಾವಣ ಶನಿವಾರದ ಪ್ರಯತ್ನ ಭಕ್ತ ಸಾಗರ ಹರಿದು ಬಂದಿತ್ತು. ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಗೋಪಾಲನ ದರ್ಶನ ಪಡೆದರು. ಅರ್ಚಕ ಗೋಪಾಲಕೃಷ್ಣ ಭಟ್ ಹಿಮವದ್ ಗೋಪಾಲಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ಹೂವಿನ ಅಲಂಕಾರ ಮಾಡಿದ್ದರು. 

ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜಗರ ಸೇರಿದಂತೆ ನೆರೆಯ ಕೇರಳ, ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಿಂದ 25ಕ್ಕೂ ಅಧಿಕ ಬಸ್‍ಗಳನ್ನು ನಿಯೋಜನೆ ಮಾಡಲಾಗಿತ್ತು. ಖಾಸಗಿ ಆಟೋ, ಟೆಂಪೋಗಳು ಸಂಚಾರ ಮಾಡಿದವು.

ಬೆಳಗ್ಗಿನಿಂದಲೇ ಭಕ್ತರು ಆಗಮಿಸಿದ್ದ ಕಾರಣ ಗೋಪಾಲಸ್ವಾಮಿ ತಪ್ಪಲಿನಲ್ಲಿ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು.

ಕೊಳ್ಳೇಗಾಲದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಳದಲ್ಲಿ ಕೊನೆ ಶ್ರಾವಣ ಶನಿವಾರದ ಹಿನ್ನಲೆಯಲ್ಲಿ ಭಕ್ತರು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿದರು.
ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಮಹದೇಶ್ವರ ದೇವಾಲಯದಲ್ಲಿ ಶುಕ್ರವಾರ ಅಮಾವಾಸ್ಯೆ ರಥೋತ್ಸವದ ಹಿನ್ನಲೆಯಲ್ಲಿ ಉದ್ಭವ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

Cut-off box - ಕಂದಹಳ್ಳಿ ಮಾದಪ್ಪನಿಗೆ ಅಮಾವಾಸ್ಯೆ ಪೂಜೆ ಯಳಂದೂರು ತಾಲ್ಲೂಕಿನ ಕಂದಹಳ್ಳಿ ಮಾದಪ್ಪ ದೇವಾಲಯದಲ್ಲಿ ಶನಿವಾರ ಜರುಗಿದ ಅಮಾವಾಸ್ಯೆ ರಥೋತ್ಸವದಲ್ಲಿ ಅಪಾರ ಭಕ್ತರು ನೆರೆದು  ‘ಉಘೇ ಮಾದಪ್ಪ’ ಉದ್ಗೋಷ ಮೊಳಗಿಸಿದರು. ಮುಂಜಾನೆ ಸುವರ್ಣಾವತಿ ನದಿಯಲ್ಲಿ ಮಿಂದು ಮಡಿಯುಟ್ಟು ದೇವಳದ ಸುತ್ತಲ ವೃಕ್ಷ ಹಾಗೂ ತೆಳ್ಳನೂರು ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಾದಪ್ಪನ ಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಧೂಪ ಹಾಕಿ ಪಂಜಿನ ಜ್ಯೋತಿ ಬೆಳಗಿ ಧನ್ಯತೆ ಮೆರೆದರು. ಮಧ್ಯಾಹ್ನ 11ಕ್ಕೆ ಮಹದೇಶ್ವರ ಮೂರ್ತಿಗೆ ಬಗೆ ಬಗೆಯ ಹೂಹಾರಗಳ ಹಾಗೂ ಆಭರಣಗಳಿಂದ ಸಿಂಗರಿಸಲಾಗಿತ್ತು. ಉತ್ಸವ ಮಾದಪ್ಪನ ಮೂರ್ತಿಯ ರಥಾರೋಹಣ ನಡೆಯಿತು. ಭಕ್ತರು ಮತ್ತು ಮಕ್ಕಳು ಸ್ವಾಮಿಯ ಬೆಳ್ಳಿ ದಂಡಕ ಹೊತ್ತು ತೇರನ್ನು ಎಳೆದರು. ದೇವಾಲಯದ ಮುಂಭಾಗದ ತೋಪಿನಲ್ಲಿ ಅನ್ನ ಪ್ರಸಾದ ಸೇವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.