ADVERTISEMENT

ಚಾಮರಾಜನಗರ: ಮೂವರು ರೈತರ ಮೇಲೆ ಚಿರತೆ ದಾಳಿ

ಗಂಭೀರ ಗಾಯ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 15:38 IST
Last Updated 3 ಏಪ್ರಿಲ್ 2020, 15:38 IST
ಗಣೇಶ್‌
ಗಣೇಶ್‌   

ಚಾಮರಾಜನಗರ: ತಾಲ್ಲೂಕಿನ ವೀರನಪುರ ಮತ್ತು ಹಳೇಪುರ ಗ್ರಾಮಗಳಲ್ಲಿ ಶುಕ್ರವಾರ ಮುಂಜಾನೆ ಮೂವರು ರೈತರ ಮೇಲೆ ಚಿರತೆ ದಾಳಿ ನಡೆಸಿದೆ. ಮೂವರಿಗೂ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೀರನಪುರ ಗ್ರಾಮದ ಶಂಭುಲಿಂಗಪ್ಪ, ಗಣೇಶ್‌ ಹಾಗೂ ಹಳೇಪುರ ಗ್ರಾಮದ ಸಿದ್ದರಾಜು ಅವರು ಚಿರತೆ ದಾಳಿಗೆ ತುತ್ತಾದವರು.

ಮೂವರ ಮೇಲೆಯೂಒಂದೇ ಚಿರತೆ ದಾಳಿ ನಡೆಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶಂಭುಲಿಂಗಪ್ಪ ಅವರು ತಮ್ಮ ಜಮೀನಿನ ಗುಡಿಸಲಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ಚಿರತೆ ಬಂದಿದೆ. ಇದು ಗೊತ್ತಾಗುತ್ತಿದ್ದಂತೆ ಅದನ್ನು ಓಡಿಸಲು ಮುಂದಾದರು. ಈ ಸಂದರ್ಭದಲ್ಲಿ ಚಿರತೆ ಅವರ ಮೇಲೆ ದಾಳಿ ನಡೆಸಿತು. ಕತ್ತು, ಬೆನ್ನು ಮತ್ತು ಬಲ ಕೈಗೆ ಗಾಯವಾಗಿದೆ.

ಶಂಭುಲಿಂಗಪ್ಪ ಅವರು ಚೀರಾಡುತ್ತಿದ್ದಂತೆಯೇ ಪಕ್ಕದ ಜಮೀನಿನಲ್ಲಿದ್ದ ಗಣೇಶ್‌ ಅವರು ಬಂದು, ಊರಿನವರಿಗೆ ಕರೆ ಮಾಡುವ ಸಂದರ್ಭದಲ್ಲಿ ಚಿರತೆ ಅವರ ಮೇಲೆಯೂ ದಾಳಿ ಮಾಡಿ ಕುತ್ತಿಗೆ ಹಾಗೂ ತಲೆಯ ಹಿಂಭಾಗಕ್ಕೆ ಗಾಯಗೊಳಿಸಿ ಅಲ್ಲಿಂದ ಓಡಿ ಹೋಗಿ ಹೋಯಿತು.

ವೀರನಪುರ ಗ್ರಾಮಕ್ಕೆ ಸಮೀಪದಲ್ಲಿರುವ ಹಳೇಪುರ ಗ್ರಾಮದಲ್ಲಿ ಕೊಟ್ಟಿಗೆಯೊಂದರಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಹಸುವಿನ ಮಾಲೀಕ ಸಿದ್ದರಾಜು ಅವರು ಚಿರತೆ ಮೇಲೆ ಬ್ಯಾಟರಿ ಲೈಟ್‌ ಬೆಳಕನ್ನು ಹಾಯಿಸುತ್ತಿದ್ದಂತೆ ಚಿರತೆ ಅವರತ್ತ ನೆಗೆದಿದೆ. ಸಿದ್ದರಾಜು ಅವರ ಎಡ ಭುಜ ಹಾಗೂ ಬೆನ್ನಿಗೆ ಏಟಾಗಿದೆ.

ತಕ್ಷಣವೇ ಮೂವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಪ್ರಾಣಕ್ಕೂ ಅಪಾಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಸೆರೆಗೆ ಕಾರ್ಯಾಚರಣೆ: ಈ ಮಧ್ಯೆ, ದಾಳಿ ನಡೆಸಿದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

‘ಹಳೇಪುರ, ವೀರನಪುರದ ಸುತ್ತಮುತ್ತ ಐದು ಬೋನುಗಳನ್ನು ಇಡಲಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ವಲಯ ಅರಣ್ಯ ಅಧಿಕಾರಿ ಅಭಿಲಾಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರ್ನಾಲ್ಕು ತಿಂಗಳಿಂದ ಹಾವಳಿ

‘ವೀರನಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮೂರ್ನಾಲ್ಕು ತಿಂಗಳುಗಳಿಂದ ಚಿರತೆಗಳ ಹಾವಳಿ ಜೋರಾಗಿದೆ. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಲೇ ಇವೆ. ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮದ ಪ್ರದೀಪ್‌ ದೂರಿದರು.

ಈ ಭಾಗದಲ್ಲಿ ಹಲವು ಕಲ್ಲಿನ ಕ್ವಾರಿಗಳಿದ್ದು, ಅಲ್ಲಿ ಚಿರತೆಗಳು ಆಶ್ರಯ ಪಡೆಯುತ್ತಿವೆ. ಗ್ರಾಮದ ಸುತ್ತಮುತ್ತಮೂರ್ನಾಲ್ಕು ಚಿರತೆಗಳು ಓಡಾಡುತ್ತಿವೆ. ಇನ್ನಾದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.