ADVERTISEMENT

ಮಾದಪ್ಪನ ಬೆಟ್ಟಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ

ಭಕ್ತರಲ್ಲಿ ಹೆಚ್ಚಿದ ಆತಂಕ: ಸುರಕ್ಷತೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:11 IST
Last Updated 12 ಫೆಬ್ರುವರಿ 2026, 0:11 IST
<div class="paragraphs"><p>ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೊರಟಿದ್ದ ಬಾಲಕ ಚಿರತೆ ದಾಳಿಯಿಂದ ಗಾಯಗೊಂಡಿರುವುದು</p></div>

ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೊರಟಿದ್ದ ಬಾಲಕ ಚಿರತೆ ದಾಳಿಯಿಂದ ಗಾಯಗೊಂಡಿರುವುದು

   

ಮಹದೇಶ್ವರ ಬೆಟ್ಟ: ಜ.21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿಯಿಂದ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದ ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ ಮಂಗಳವಾರ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಈ ಘಟನೆಯಿಂದ ಭಕ್ತರು ಆತಂಕಗೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಶ್ರೇಯಸ್ (8) ಗಾಯಗೊಂಡ ಬಾಲಕ. ಮಂಗಳವಾರ ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ತಾಳುಬೆಟ್ಟದಿಂದ ಮಲೆ ಮಹದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವಾಗ 7ಕಿ.ಮೀ ದೂರದ ತಿರುವಿನಲ್ಲಿ ಚಿರತೆ ದಾಳಿ ನಡೆಸಿದೆ. ಸ್ಥಳದಲ್ಲಿದ್ದವರ ಕಿರುಚಾಟ ಕೇಳಿ ಚಿರತೆ ಪರಾರಿಯಾಗಿದೆ. ಬಾಲಕನ ಕಿವಿಗೆ ಸಣ್ಣ ಗಾಯವಾಗಿದ್ದು ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಪ್ರಸಿದ್ದ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರನ ದೇವಾಲಯದಲ್ಲಿ ನಡೆಯುವ ಶಿವರಾತ್ರಿ ಜಾತ್ರೆಗೆ ನಾಡಿನ ಮೂಲೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಬರುವುದು ರೂಢಿ. ರಾಜ್ಯ ಮಾತ್ರವಲ್ಲದೆ ನೆರೆಯ ತಮಿಳುನಾಡು ಹಾಗೂ ಕೇರಳದಿಂದಲೂ ಭಕ್ತರು ಮಾದಪ್ಪನ ದರ್ಶನಕ್ಕೆ ಬರುತ್ತಾರೆ.

ಕ್ಷೇತ್ರದಲ್ಲಿ ವಾರ್ಷಿಕವಾಗಿ ಪ್ರಮುಖ ಜಾತ್ರೆಗಳಾದ ಮಹಾಲಯ ಜಾತ್ರೆ, ದೀಪಾವಳಿ, ಮಹಾ ಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಗಳು ನಡೆಯುತ್ತವೆ. ಈ ಅವಧಿಯಲ್ಲಿ ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬಂದು ಮಾದಪ್ಪನ ದರ್ಶನ ಪಡೆದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದರೆ, ಈಚೆಗೆ ಪಾದಯಾತ್ರೆಗೆ ಬರುವ ಭಕ್ತರ ಮೇಲೆ ವನ್ಯಜೀವಿಗಳು ದಾಳಿ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಚೆನ್ನಪಟ್ಟಣದಿಂದ ಕ್ಷೇತ್ರಕ್ಕೆ ಬಂದಿದ್ದ ಭಕ್ತ ನಾಗರಾಜು ಮಾತನಾಡಿ ದಶಕಗಳಿಂದಲೂ ಮಾದಪ್ಪನ ಕ್ಷೇತ್ರಕ್ಕೆ ಬರುತ್ತಿದ್ದೇವೆ, ಹಿಂದೆಂದೂ ಕಾಡುಪ್ರಾಣಿಗಳು ದಾಳಿ ಮಾಡಿದ, ಕೊಂದು ಹಾಕಿದನ್ನು ಕಂಡಿಲ್ಲ. ಆದರೆ ಈಚೆಗೆ ಪ್ರಾಣಿಗಳ ದಾಳಿ ಹೆಚ್ಚಾಗಿದ್ದು ಜೀವ ಭಯದಲ್ಲಿ ಕ್ಷೇತ್ರಕ್ಕೆ ಬರಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲೂ ಭಕ್ತರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನಗೃಹ, ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲ. ದರ್ಶನಕ್ಕೆ ಹಲವು ತಾಸು ಸರತಿಯಲ್ಲಿ ಕಾಯಬೇಕು, ಇದರ ನಡುವೆ ಈಗ ಭಕ್ತರ ಸುರಕ್ಷತೆಯೂ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾದಯಾತ್ರಿಗಳ ಮೇಲೆ ವನ್ಯಜೀವಿಗಳು ದಾಳಿ ಮುಂದುವರಿದರೆ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ತಗ್ಗಲಿದೆ. ಅರಣ್ಯ ಇಲಾಖೆ ಹಾಗೂ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.