
ಗುಂಡ್ಲುಪೇಟೆ: ರೈತರಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಬಫರ್ ಜೋನ್ ವಲಯ ವ್ಯಾಪ್ತಿಯ ತಗ್ಗಲೂರಿನಲ್ಲಿ ನಡೆದಿದೆ.
ಗ್ರಾಮದ ನಾಗರಾಜು ಎಂಬ ರೈತನ ಸರ್ವೆ ನಂ.103ರಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ 4-5 ವರ್ಷದ ಹೆಣ್ಣು ಚಿರತೆಯೊಂದು ಶನಿವಾರ ತಡರಾತ್ರಿ ಸೆರೆಯಾಗಿದೆ.
ಭಾನುವಾರ ಬೆಳಿಗ್ಗೆ ಜಮೀನಿಗೆ ಬಂದು ನೋಡಿದಾಗ ಚಿರತೆ ಬೋನಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ಬಫರ್ ವಲಯ ಡಿಆರ್‌ಎಫ್‌ಒ ಶಿವಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಬೋನಿನಲ್ಲಿ ಸೆರೆಯಾದ ಚಿರತೆ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಂಡೀಪುರ-ತಮಿಳುನಾಡು ಗಡಿಭಾಗದ ಮೊಯೂರು ದಟ್ಟಾರಣ್ಯದ ಮಧ್ಯೆ ಭಾಗದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲ ತಿಳಿಸಿದೆ.
ರೈತರು ನಿರಾಳ: ಕಳೆದೊಂದು ತಿಂಗಳಿಂದ ತಗ್ಗಲೂರು ಸುತ್ತಮುತ್ತಲು ಚಿರತೆ ಉಪಟಳ ಹೆಚ್ಚಿದ್ದು ಮೇಕೆ, ನಾಯಿ, ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಜೊತೆಗೆ ರೈತರ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುತಿತ್ತು. ಇದರಿಂದ ಭಯಭೀತರಾಗಿದ್ದ ರೈತರು ಚಿರತೆ ಸೆರೆಗೆ ಒತ್ತಾಯಿಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯಾಧಿಕಾರಿಗಳು ವಾರದ ಹಿಂದೆ ನಾಗರಾಜು ಎಂಬುವವರ ಜಮೀನಿನಲ್ಲಿ ಬೋನ್ ಇರಿಸಿದ್ದರು. ಇದೀಗ ಆ ಬೋನಿಗೆ ಚಿರತೆ ಬಿದ್ದಿದ್ದು, ಈ ವ್ಯಾಪ್ತಿಯ ರೈತರು ನಿರಾಳರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.