ADVERTISEMENT

ವಾಹನ ಡಿಕ್ಕಿ: ಸ್ಥಳದಲ್ಲೇ ಚಿರತೆ ಸಾವು, ಮರುಕಳಿಸುತ್ತಿರುವ ಪ್ರಕರಣ

ವೇಗ ನಿಯಂತ್ರಣ: ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹ

ಬಿ.ಬಸವರಾಜು
Published 23 ಫೆಬ್ರುವರಿ 2022, 2:54 IST
Last Updated 23 ಫೆಬ್ರುವರಿ 2022, 2:54 IST
ಲೊಕ್ಕನಹಳ್ಳಿಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ಚಿರತೆ
ಲೊಕ್ಕನಹಳ್ಳಿಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ಚಿರತೆ   

ಹನೂರು: ತಾಲ್ಲೂಕಿನ ಗುರುಮಲ್ಲಪ್ಪನದೊಡ್ಡಿ ಗ್ರಾಮದ ಬಳಿ ಭಾನುವಾರ ರಾತ್ರಿ ವಾಹನ ಡಿಕ್ಕಿಯಾಗಿ ದಷ್ಟಪುಷ್ಟವಾಗಿದ್ದ ಗಂಡು ಚಿರತೆಯೊಂದು ಮೃತಪಟ್ಟಿರುವುದಕ್ಕೆ ವನ್ಯಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆಗೆ ವಾಹನ ಡಿಕ್ಕಿ ಹೊಡೆದಿದ್ದರೂ, ದೇಹಕ್ಕೆ ಎಲ್ಲೂ ಗಾಯಗಳಾಗಿಲ್ಲ. ರಕ್ತಸ್ರಾವವೂ ಆಗಿಲ್ಲ. ಹಾಗಾಗಿ, ಮರಣೋತ್ತರ ಪರೀಕ್ಷೆ ನಡೆಯುವವರೆಗೆ ಅರಣ್ಯ ಅಧಿಕಾರಿಗಳು, ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂಬುದನ್ನು ದೃಢಪಡಿಸಿರಲಿಲ್ಲ.

ಅಪಘಾತದಲ್ಲಿ ಗಾಯಗೊಂಡು ಅಥವಾ ರಕ್ತಸ್ರಾವ ಆಗಿಯೇ ಪ್ರಾಣಿಗಳು ಸಾಯುತ್ತವೆ ಎಂದೇನಿಲ್ಲ. ಒಮ್ಮೆಮ್ಮೆ ತಲೆಗೆ ಒಳಭಾಗಕ್ಕೆ ಬಲವಾದ ಪೆಟ್ಟು ಸಂದರ್ಭದಲ್ಲೂ ವನ್ಯಪ್ರಾಣಿಗಳು ಮೃತಪಡುತ್ತವೆ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

ADVERTISEMENT

ಇತ್ತೀಚೆಗೆ ತಮಿಳುನಾಡು ಅರಣ್ಯ ಇಲಾಖೆ ದಿಂಬಂ ಘಾಟಿನಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಿದೆ. ಚಿರತೆ ಮೃತಪಟ್ಟಿರುವ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು, ದಿಂಬಂ ಘಾಟಿಯನ್ನು ಸಂಪರ್ಕಿಸುತ್ತದೆ. ಹಾಸನೂರು ಚೆಕ್‌ಪೋಸ್ಟ್‌ನಿಂದ ಸಂಜೆ 6 ಗಂಟೆಯ ನಂತರ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಮಧ್ಯಮ ಹಾಗೂ ಲಘು ವಾಹನಗಳಿಗೆ ರಾತ್ರಿ 9 ಗಂಟೆಯ ಬಳಿಕ ನಿರ್ಬಂಧ ವಿಧಿಸಲಾಗುತ್ತಿದೆ.

ಬೈಲೂರಿನಿಂದ ಅರ್ಧನಾರಿಪುರ ಮಾರ್ಗವಾಗಿ ದಿಂಬಂಗೆ ಹೋಗುವ ರಸ್ತೆಯಲ್ಲಿ ಚಿರತೆ ಮೃತಪಟ್ಟಿದೆ. ಚಿರತೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿರುವ ಸಾಧ್ಯತೆ ಹೆಚ್ಚಾಗಿದೆ. ರಾತ್ರಿ ತಮಿಳುನಾಡಿನ ಚೆಕ್‌ಪೋಸ್ಟ್‌ ಬಂದ್‌ ಆಗಬಹುದು ಎಂಬ ಕಾರಣಕ್ಕೆ ಚಾಲಕ ವೇಗವಾಗಿ ವಾಹನ ಚಲಾಯಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಸೋಮವಾರ ರಾತ್ರಿ ಮೂರು ವಾಹನಗಳು ಹೋಗಿರುವ ದೃಶ್ಯ ತಮಿಳುನಾಡು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಸೆರೆಯಾಗಿರುವ ಬಗ್ಗೆ ಅಲ್ಲಿನ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

’ಯಾವ ವಾಹನ ಡಿಕ್ಕಿ ಹೊಡೆದಿದೆ, ಯಾವ ಸಮಯದಲ್ಲಿ ಘಟನೆ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು‘ ಎಂದು ಬೈಲೂರು ವಲಯದ ಅರಣ್ಯಾಧಿಕಾರಿ ಶಿವರಾಮು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಮರುಕಳಿಸುತ್ತಿರುವ ಘಟನೆ: ವಾಹನಗಳ ಅತಿ ವೇಗಕ್ಕೆ ವನ್ಯಪ್ರಾಣಿಗಳು ಬಲಿಯಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಾಕಷ್ಟು ಪ್ರಾಣಿಗಳು ವಾಹನ ಅಪಘಾತದಿಂದಾಗಿ ಮೃತಪಟ್ಟಿವೆ. ಇಷ್ಟಿದ್ದರೂ, ಅರಣ್ಯ ಭಾಗದಲ್ಲಿ ಹಾದುಹೋಗುವ ವಾಹನಗಳ ಅತಿ ವೇಗಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದು ವನ್ಯಪ್ರಿಯರ ಆರೋಪ.

ವಾಹನ ತಡೆಯಿರಿ: ತಮಿಳುನಾಡಿನ ಹಾಸನೂರು ಚೆಕ್‌ಪೋಸ್ಟ್‌ನಲ್ಲಿ ರಾತ್ರಿ ವಾಹನಗಳನ್ನು ತಡೆಯುವುದರಿಂದ, ಜಿಲ್ಲಾಡಳಿತ, ಬಿಆರ್‌ಟಿ ಅರಣ್ಯ ಪ್ರದೇಶದಲ್ಲೂ ರಾತ್ರಿ ನಿರ್ದಿಷ್ಟ ಸಮಯದ ಬಳಿಕ ವಾಹನಗಳ ಸಂಚಾರ ನಿರ್ಬಂಧಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ರಸ್ತೆ ಡುಬ್ಬ ನಿರ್ಮಿಸಿ
ಅರ್ಧನಾರಿಪುರ ಚೆಕ್ ಪೋಸ್ಟ್‌ನಿಂದ ಲೊಕ್ಕನಹಳ್ಳಿವರೆಗೆ ಅರಣ್ಯದ ಮಧ್ಯೆಯೇ ರಾಜ್ಯ ಹೆದ್ಧಾರಿ ಹಾದು ಹೋಗಿದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವುದರಿಂದ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ವನ್ಯಪ್ರಾಣಿಗಳು ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿ ಸಾವಿಗೀಡಾಗುತ್ತವೆ. ವಾಹನಗಳ ವೇಗ ನಿಯಂತ್ರಣಕ್ಕಾಗಿ ಅಲ್ಲಲ್ಲಿ ರಸ್ತೆ ಡುಬ್ಬಗಳನ್ನು ನಿರ್ಮಿಸಬೇಕು ಎಂಬುದು ಅವರ ಒತ್ತಾಯ.

’ಇದೇ ರಸ್ತೆಯಲ್ಲಿ ಬರುವ ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ ವತಿಯಿಂದ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಈಗ ಅದನ್ನು ಕಿತ್ತು ಹಾಕಲಾಗಿದೆ. ರಸ್ತೆಗಳ ಉಬ್ಬು ಇದ್ದರೆ, ವಾಹನಗಳ ವೇಗವನ್ನು ನಿಯಂತ್ರಿಸಬಹುದು‘ ಎಂದು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವಯೋಗೇಂದ್ರ ಕೊಳ್ಳೇಗಾಲ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.