ADVERTISEMENT

ಮಕ್ಕಳ ವಿಜ್ಞಾನ, ಅನ್ಯಗ್ರಹ ಜೀವಿಗಳ ಕೌತುಕ ತಣಿಸಿದ ವಿಜ್ಞಾನಿ ಕಿರಣ್‌ ಕುಮಾರ್‌

ಸಚಿವ ಸೋಮಣ್ಣ ಜನ್ಮ ದಿನ ಶಾಲೆಗೆ ಗ್ರಂಥಾಲಯ ಕೊಡುಗೆ; ರಾಜವಂಶಸ್ಥ ಯದುವೀರ್‌ ಭಾಗಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 3:12 IST
Last Updated 21 ಜುಲೈ 2021, 3:12 IST
ವಿಜ್ಞಾನಿ ಕಿರಣ್‌ ಕುಮಾರ್ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್‌ ಅವರು ಹೊಸ ಗ್ರಂಥಲಾಯದಲ್ಲಿನ ಪುಸ್ತಕಗಳನ್ನು ವೀಕ್ಷಿಸಿದರು
ವಿಜ್ಞಾನಿ ಕಿರಣ್‌ ಕುಮಾರ್ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್‌ ಅವರು ಹೊಸ ಗ್ರಂಥಲಾಯದಲ್ಲಿನ ಪುಸ್ತಕಗಳನ್ನು ವೀಕ್ಷಿಸಿದರು   

ಗುಂಡ್ಲುಪೇಟೆ: ಬಾಹ್ಯಾಕಾಶದ ವಿಜ್ಞಾನಿಯಾಗಲು ಯಾವ ರೀತಿ ತರಬೇತಿ ಹೊಂದಬೇಕು? ಅನ್ಯಗ್ರಹದ ಜೀವಿಗಳು ಇರುವುದು ದೃಢಪಟ್ಟಿದೆಯಾ? ವಿಜ್ಞಾನಿಯಾಗಲು ನಿಮ್ಮ ಸಲಹೆಗಳೇನು? ವಿಜ್ಞಾನಿಯಾಗಿ ನೀವು ಏನು ಸಾಧನೆ ಮಾಡಿದ್ದೀರಿ...?

ಅಂತರಿಕ್ಷದ ಬಗ್ಗೆ ಕುತೂಹಲ ಹೊಂದಿರುವ ಶಾಲಾ ಮಕ್ಕಳಿಂದ ಇಂತಹ ಪ್ರಶ್ನೆಗಳು ತೂರಿ ಬರುತ್ತಿದ್ದರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ, ಹಿರಿಯ ವಿಜ್ಞಾನಿ ಎ.ಎಸ್‌.ಕಿರಣ್‌ಕುಮಾರ್ ಅವರು ತಾಳ್ಮೆಯಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾ ಮಕ್ಕಳ ಕುತೂಹಲ ತಣಿಸಿದರು.

ಇದಕ್ಕೆ ಸಾಕ್ಷಿಯಾಗಿದ್ದು ವಸತಿ ಸಚಿವ ವಿ.ಸೋಮಣ್ಣ ಅವರ 70 ಜನ್ಮದಿನೋತ್ಸವ ಪ್ರಯುಕ್ತ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದತಾಲ್ಲೂಕಿನ ಹಂಗಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಗ್ರಂಥಾಲಯ ಕೊಡುಗೆ, ಬುಡಕಟ್ಟು ಜನಾಂಗದ ಸಾಧಕರಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ.

ADVERTISEMENT

ಹತ್ತನೇ ತರಗತಿ ವಿದ್ಯಾರ್ಥಿನಿ ಸುನಂದಾ, ‘ಗ್ರಾಮೀಣ ಭಾಗದ ವಿದ್ಯಾರ್ಥಿ ಆಗಿ ವಿಜ್ಞಾನಿಯಾಗಲು ಯಾವ ತರಬೇತಿ ಪಡೆಯಬೇಕು’ ಎಂದು ಪ್ರಶ್ನಿಸಿದಾಗ ಕಿರಣ್ ಕುಮಾರ್ ಅವರು, ‘ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಪರೀಕ್ಷೆಗೆಂದು ಮಾತ್ರವೇ ಓದಬಾರದು. ಸುತ್ತಮುತ್ತಲಿನ ವಿಷಯ ಬಗ್ಗೆ ಅರಿವಿರಬೇಕು. ಹಂತಹಂತವಾಗಿ ಕಲಿಯುವ ಮೂಲಕ ತರಬೇತಿ ಪಡೆಯಬೇಕು’ ಎಂದರು.

ಬಾಹ್ಯಾಕಾಶದ ವಿಜ್ಞಾನಿಯಾಗಲು ಎಸ್ಸೆಸ್ಸೆಲ್ಸಿ ನಂತರ ಏನು ಓದಬೇಕು ಎಂಬ ಪ್ರಶ್ನೆಯನ್ನು ತೇಜಾ ಎಂಬ ವಿದ್ಯಾರ್ಥಿನಿ ಕೇಳಿದಾಗ, ‘ಜೀವಿ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಏರೋನಾಟಿಕ್ಸ್ ಸೇರಿದಂತೆ ಕಲಾ ವಿಭಾಗ ವ್ಯಾಸಂಗ ಮಾಡಿದವರೂ ಇಸ್ರೊದಲ್ಲಿ ಕೆಲಸ ಮಾಡಬಹುದು’ ಎಂದರು.

ಬೇರೆ ಗ್ರಹಗಳಲ್ಲಿ ಜೀವಿಗಳಿರುವುದು ನಿಜವೇ ಎಂಬ ಮೌನಳ ಪ್ರಶ್ನೆಗೆ, ‘ಅನ್ಯಗ್ರಹ ಜೀವಿ ಇರುವುದಕ್ಕೆ ಇದುವರೆಗೆ ಸಾಕ್ಷ್ಯ ಸಿಕ್ಕಿಲ್ಲ. ಹುಡುಕುವ ಪ್ರಯತ್ನ ನಮಡೆಯುತ್ತಿದೆ. ಮಾಹಿತಿ ಸಿಕ್ಕಿಲ್ಲ’ ಎಂದು ಕಿರಣ್‌ ಕುಮಾರ್‌ ಉತ್ತರಿಸಿದರು.

ಶಿಕ್ಷಣದಲ್ಲಿ ಸೌಲಭ್ಯಗಳ ಕೊರತೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಪ್ರಶ್ನೆ ಕೇಳಿದ ಅಂಜಲಿ ಎಂಬ ವಿದ್ಯಾರ್ಥಿನಿ, ಭಾರತೀಯ ಮತ್ತು ಪಾಶ್ಚಾತ್ಯ ಶಿಕ್ಷಣಕ್ಕೆ ಇರುವ ವ್ಯತ್ಯಾಸದ ಬಗ್ಗೆ ವಿವರಣೆ ಬಯಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ಯದುವೀರ್‌ ಅವರು, ‘ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ, ಸೌಲಭ್ಯಗಳ ಕೊರತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿದೆ’ ಎಂದರು.

ಇದಕ್ಕೂ ಮೊದಲು ಯದುವೀರ್‌ ಹಾಗೂ ಕಿರಣ್‌ ಕುಮಾರ್‌ ಅವರು, ಶಾಲೆಗೆ ಕೊಡುಗೆಯಾಗಿ ನೀಡಿದ ಗ್ರಂಥಾಲಯ ಉದ್ಘಾಟಿಸಿ, ಅಲ್ಲಿರುವ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರಾಜವಂಶಸ್ಥ ಯದುವೀರ್‌ ಅವರು, ‘ಚಾಮರಾಜನಗರ ಹಾಗೂ ಮೈಸೂರಿಗು ಅವಿನಭಾವ ಸಂಬಂಧವಿದೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಕೋಟೆಕಟ್ಟಿ ಗಂಗಾ, ಹೊಯ್ಸಳರ ಕಾಲದಲ್ಲಿ ಆಳ್ವಿಕೆ ಮಾಡುತ್ತಿದ್ದರು. ಮನೆತನದ ಮನೆ ದೇವರು ಹಿಮವದ್ ಗೋಪಾಲಸ್ವಾಮಿ ಆಗಿರುವುದರಿಂದ ಬೆಟ್ಟಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಪ್ರಕೃತಿ ಮಡಿಲಿನಲ್ಲಿ ಇರುವುದರಿಂದ ಈ ಭಾಗದ ವಾತಾವರಣ ತುಂಬಾ ಸುಂದರವಾಗಿದೆ. ಶಿಕ್ಷಣ ಪಡೆಯಲು ಇಲ್ಲಿ ಸಾಕಷ್ಟು ಅವಕಾಶವಿದ್ದು, ಉದ್ಘಾಟನೆಗೊಂಡಿರುವ ಗ್ರಂಥಾಲಯದ ಉಪಯೋಗ ಪಡೆದು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸಬೇಕು’ ಎಂದು ತಿಳಿಸಿದರು.

ಶಾಸಕ ಸಿ.ಎಸ್.ನಿರಂಜನ ಕುಮಾರ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಕಾಂಗ್ರೆಸ್ ಮುಖಂಡ ಎಚ್.ಎಸ್.ನಂಜಪ್ಪ, ಮುಖಂಡ ಎಚ್‌.ಕೆ.ರಾಜಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಮೊದಲಾದವರು ಇದ್ದರು.

1,400 ಪುಸ್ತಕಗಳು

ಶಾಲೆಗೆ ಕೊಡುಗೆಯಾಗಿ ನೀಡಿದ ಗ್ರಂಥಾಲಯದಲ್ಲಿ 1,400 ಹೆಚ್ಚು ಪುಸ್ತಕಗಳಿವೆ. ಪರಿಸರ ಜ್ಞಾನಕ್ಕೆ ಸಂಬಂಧಿಸಿದಂತೆ, ವಿಜ್ಞಾನ ತಂತ್ರಜ್ಞಾನ, ಮಾಧ್ಯಮ, ಮತ್ತು ಗಣಿತ ಪುಸ್ತಕದ ಜೊತೆಗೆ ಕನ್ನಡ ವ್ಯಾಕರಣ, ಕವಿ, ಲೇಖಕರ ಪರಿಚಯದ ಪುಸ್ತಕ, ಇತಿಹಾಸ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.