ADVERTISEMENT

ಸಂತೇಮರಹಳ್ಳಿ| ಮದ್ಯದಂಗಡಿ ಆರಂಭಕ್ಕೆ ವಿರೋಧ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:53 IST
Last Updated 13 ಜನವರಿ 2026, 6:53 IST
ಸಂತೇಮರಹಳ್ಳಿ ಸಮೀಪದ ಭೋಗಾಪುರ ಗ್ರಾಮದಲ್ಲಿ ತೆರೆಯಲಿರುವ ವೈನ್‌ಶಾಪ್ ವಿರುದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂತೇಮರಹಳ್ಳಿ ಸಮೀಪದ ಭೋಗಾಪುರ ಗ್ರಾಮದಲ್ಲಿ ತೆರೆಯಲಿರುವ ವೈನ್‌ಶಾಪ್ ವಿರುದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.   

ಸಂತೇಮರಹಳ್ಳಿ: ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ ಗ್ರಾಮದ ಮದ್ಯದಂಗಡಿಯನ್ನು ಭೋಗಾಪುರ ಗೇಟ್ ಬಳಿಗೆ ಸ್ಥಳಾಂತರ ಮಾಡಿರುವ ಕ್ರಮವನ್ನು ಖಂಡಿಸಿ ಭೋಗಾಪುರ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಭೋಗಾಪುರ ಗೇಟ್ ಮುಖ್ಯ ರಸ್ತೆ ಬಳಿ ವೈನ್‌ ಶಾಪ್‌ ತೆರೆಯಲು ಅಂಗಡಿ ನಿರ್ಮಾಣ ಮಾಡಿರುವ ಮುಂಭಾಗದಲ್ಲಿ ಸೇರಿದ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

‘ಚಿಕ್ಕಹೊಳೆ ಬಳಿ ಇರುವ ವೈನ್‌ ಶಾಪ್‌ಅನ್ನು ಭೋಗಾಪುರ ಬಳಿ ಆರಂಭಿಸಲು ಅನುಮತಿ ನೀಡುವ ಮೊದಲೇ ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಭೋಗಾಪುರ ಗ್ರಾಮಸ್ಥರ ಅಭಿಪ್ರಾಯ ಪಡೆದು ಸ್ಥಳಾಂತರ ಮಾಡಲು ಆದೇಶ ನೀಡಬೇಕಾಗಿತು. ಅಧಿಕಾರಿಗಳು ಗ್ರಾಮಸ್ಥರ ಹಿತದೃಷ್ಟಿ ನೋಡದೇ ಹಣದ ಆಸೆಗಾಗಿ ಭೋಗಾಪುರ ಗೇಟ್ ಬಳಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ಖಂಡನೀಯ. ಕೂಡಲೇ ಆದೇಶವನ್ನು ರದ್ದು ಪಡಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಭೋಗಾಪುರ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಸಮರ್ಪಕವಾಗಿ ಸಾರಿಗೆ ಸೌಲಭ್ಯವಿಲ್ಲದ ಪರಿಣಾಮ ಶಾಲಾ ಕಾಲೇಜಿಗೆ ಹಾಗೂ ಕೂಲಿ ಕೆಲಸಕ್ಕೆ ತೆರಳುವವರು ಕಾಲ್ನಡಿಗೆ ಮೂಲಕ ಭೋಗಾಪುರ ಗೇಟ್ ಬಳಿಯಿಂದ ಚಾಮರಾಜನಗರ ಹಾಗೂ ಮೈಸೂರು ಕಡೆಗೆ ಹೋಗಬೇಕು. ಈಗ ಭೋಗಾಪುರ ಮುಖ್ಯ ರಸ್ತೆ ಬಳಿ ಬಾರ್ ತೆರೆಯುವುದರಿಂದ ಕುಡುಕರ ಹಾವಳಿ ಹೆಚ್ಚಾಗಿ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ತೊಂದರೆ ಉಂಟಾಗುತ್ತದೆ’ ಎಂದರು.

‘ಇಲ್ಲಿ ವೈನ್‌ ಶಾಪ್‌ ಆರಂಭಿಸುವುದು ಬೇಡವೆಂದು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಅಂಗಡಿ ತೆರೆಯಲು ಮುಂದಾಗಿರುವುದು ಎಷ್ಟು ಸರಿ’ ಎಂದು ಗ್ರಾಮಸ್ಥರು ಆರೋಪಿಸಿದರು.

ಸ್ಥಳಕ್ಕೆ ಅಬಕಾರಿ ಇಲಾಖೆ ಡಿವೈಎಸ್‌ಪಿ ವಿಜಯ್‌ಕುಮಾರ್ ಭೇಟಿ ನೀಡಿ ಪ್ರತಿಭಟನಕಾರರಿಂದ ಮಾಹಿತಿ ಪಡೆದು ಮಾತನಾಡಿ, ‘ಭೋಗಾಪುರ ಗೇಟ್ ಬಳಿ ತೆರೆಯಬೇಕಾಗಿರುವ ವೈನ್‌ ಶಾಪ್‌ ಅನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

ಭೋಗಾಪುರ ಡಿ.ನಾಗೇಂದ್ರ, ಗೌಡಿಕೆ ರವಿಕುಮಾರ್, ಕೆಲ್ಲಂಬಳ್ಳಿ ಶ್ರೀನಿವಾಸ್‌ನಾಯ್ಕ, ಕಸ್ತೂರು ಗೌಡಿಕೆಬಸವಣ್ಣ, ಪುಟ್ಟೇಗೌಡನಹುಂಡಿ ರೇವಣ್ಣ, ಕೆ.ಬಸವನಪುರ ಶಿವಣ್ಣ, ಕೆ.ಮೂಕಹಳ್ಳಿ ರಮೇಶ್, ನಾಗರಾಜು, ನಂಜುಂಡಪ್ಪ, ಮಹಾಲಿಂಗು, ನಂಜುಂಡೇಗೌಡ, ರಾಜಮ್ಮ, ಜಯಲಕ್ಷ್ಮಿ, ತೇಜಾವತಿ, ರತ್ನಮ್ಮ, ನಾಗಮ್ಮ, ಕುಮಾರಿ, ಪ್ರಕಾಶ್, ಗ್ರಾಮಪಂಚಾಯಿತಿ ಜನ ಪ್ರತಿನಿಧಿಗಳು ಹಾಜರಿದ್ದರು.