ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್‌ಗೆ ಮತ್ತೆ ಆಘಾತ, ಬಿಎಸ್‌ಪಿಗೆ ಹಿನ್ನಡೆ

‘ಕೈ’ ಮರ್ಯಾದೆ ಉಳಿಸಿದ ಯಳಂದೂರು, ಹನೂರಿನಲ್ಲಿ ಜೆಡಿಎಸ್‌ ಬಲ ಹೆಚ್ಚಳ

ಸೂರ್ಯನಾರಾಯಣ ವಿ.
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST
   

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಿನ ಆಘಾತದಿಂದ ಇನ್ನೂ ಹೊರಬರದ ಜಿಲ್ಲಾ ಕಾಂಗ್ರೆಸ್‌ಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಮತ್ತೆ ಆಘಾತ ನೀಡಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಗುಂಡ್ಲುಪೇಟೆ ಪುರಸಭೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಳಂದೂರು ಬಿಟ್ಟು ಉಳಿದ ಎರಡು ಕಡೆಗಳಲ್ಲಿ ಕಾಂಗ್ರೆಸ್‌ ಸೋತಿದೆ. 23 ಸದಸ್ಯ ಬಲದ ಗುಂಡ್ಲುಪೇಟೆ ಪುರಸಭೆಯಲ್ಲಿ 8 ವಾರ್ಡ್‌ಗಳಲ್ಲಿ ಮಾತ್ರ ಗೆಲ್ಲಲು ಅದಕ್ಕೆ ಸಾಧ್ಯವಾಗಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ 13 ಸದಸ್ಯ ಬಲದ ಹನೂರು ಪಟ್ಟಣ ಪಂಚಾಯಿತಿಯಲ್ಲಿ ದಕ್ಕಿದ್ದು ನಾಲ್ಕು ಸ್ಥಾನಗಳು ಮಾತ್ರ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹಿಡಿತ ಕಡಿಮೆಯಾಗುತ್ತಿದೆ ಎಂಬ ಮಾತುಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೂ ಪುಷ್ಟಿ ನೀಡಿದೆ. 2018ರ ವಿಧಾನಸಭಾ ಚುನಾವಣೆಯ ನಂತರ ಜಿಲ್ಲೆಯಲ್ಲಿ ಕೈ ಪಾಳಯಕ್ಕೆ ಆಗುತ್ತಿರುವ ಹಿನ್ನಡೆಯ ಸರಣಿ, ಸ್ಥಳೀಯ ಸಂಸ್ಥೆಗಳ ಚುನಾವಣೆವರೆಗೂ ಮುಂದುವರಿದಿದೆ.

ADVERTISEMENT

ಹನೂರಿನಲ್ಲಿ ಅನಿರೀಕ್ಷಿತ ಸೋಲು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರಿಗೆ ಹನೂರು ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮುನ್ನಡೆ (14,250) ತಂದು ಕೊಟ್ಟಿತ್ತು. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಹನೂರು ಪಟ್ಟಣ ಪಂಚಾಯಿತಿಗೆ ಈ ಹಿಂದೆ ನಡೆದಿದ್ದ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. 2013ರಲ್ಲಿ 10 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಏರಿತ್ತು. ಹಾಗಾಗಿ, ಈ ಬಾರಿಯೂ ‘ಕೈ’ ಪಕ್ಷವೇ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಈಗ ಹೊರ ಬಿದ್ದಿರುವ ಫಲಿತಾಂಶ ಸ್ವತಃ ಪಕ್ಷದ ಮುಖಂಡರನ್ನೇ ಅಚ್ಚರಿಯಲ್ಲಿ ಕೆಡವಿದೆ. ಆರು ಸ್ಥಾನಗಳನ್ನು ಅದು ಕಳೆದು ಕೊಂಡಿದೆ. ಹಿಂದೆ ಒಂದು ಸ್ಥಾನವನ್ನೂ ಗೆಲ್ಲದೇ ಇದ್ದ ಜೆಡಿಎಸ್‌, ಆರು ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ.

ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ನಿಧನದ ನಂತರ, ಅದರಲ್ಲೂ 2018ರ ವಿಧಾನಸಭಾ ಚುನಾವಣೆಯ ಬಳಿಕ ಗುಂಡ್ಲುಪೇಟೆ ಕ್ಷೇತ್ರದಲ್ಲಿ ದುರ್ಬಲಗೊಳ್ಳುತ್ತಿರುವ ಕಾಂಗ್ರೆಸ್‌ಗೆ ಪುರಸಭೆಯಲ್ಲೂ ಬಹುಮತ ಪ‍ಡೆಯಲು ಸಾಧ್ಯವಾಗಿಲ್ಲ. 8 ವಾರ್ಡ್‌ಗಳಲ್ಲಿ ಮಾತ್ರ ಗೆಲ್ಲುವ ಮೂಲಕ ಅದು ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕಿದೆ.

ಮಾನ ಉಳಿಸಿದ ಯಳಂದೂರು:ಇದ್ದುದರಲ್ಲಿ ಯಳಂದೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್‌ನ ಮರ್ಯಾದೆಯನ್ನುಸ್ವಲ್ಪ ಮಟ್ಟಿಗೆ ಕಾಪಾಡಿದೆ. 11 ಸದಸ್ಯ ಬಲದ ಪಂಚಾಯಿತಿಯಲ್ಲಿ 10 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆದ್ದು, ಭರ್ಜರಿ ಬಹುಮತದೊಂದಿದೆ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸಿದೆ.ಹಿಂದಿನ ಚುನಾವಣೆಯಲ್ಲಿ ಅದು 5 ಸ್ಥಾನಗಳಲ್ಲಿ ಗಳಿಸಿತ್ತು. ಪಕ್ಷೇತರರ ನೆರವು ಪಡೆದು ಆಡಳಿತ ನಡೆಸಿತ್ತು. ಈ ಬಾರಿ ಇನ್ನೂ 5 ವಾರ್ಡ್‌ಗಳಲ್ಲಿ ಗೆಲುವು ಪಡೆದು ಪಂಚಾಯಿತಿಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಿದೆ.

ಬಿಜೆಪಿ ಮತ್ತಷ್ಟು ಪ್ರಬಲ: ಜಿಲ್ಲೆಯಲ್ಲಿ ಬಿಜೆಪಿ ದಿನೇ ದಿನೇ ಪ್ರಬಲವಾಗುತ್ತಿದೆ ಎಂಬುದನ್ನು ಸ್ಥಳೀಯ ಸಂಸ್ಥೆಗಳ ಫಲಿತಾಂಶ ತೋರಿಸಿದೆ. ಗುಂಡ್ಲುಪೇಟೆ ಪುರಸಭೆಯಲ್ಲಿ 13 ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಮತ್ತು ಬಾಚಹಳ್ಳಿ ತಾಲ್ಲೂಕು ಪಂಚಾಯಿತಿ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಹೆಚ್ಚಿದಂತೆ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ 15,510 ಮತಗಳ ಮುನ್ನಡೆ ಸಿಕ್ಕಿತ್ತು.

ಹನೂರು ಪಟ್ಟಣ ಪಂಚಾಯಿತಿಯಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಕಳೆದ ಚುನಾಣೆಯಲ್ಲಿ ಕೆಜೆಪಿ (ನಂತರ ಪಕ್ಷ ಬಿಜೆಪಿ ವಿಲೀನ ಆಗಿತ್ತು) ಎರಡು ಸ್ಥಾನಗಳನ್ನು ಗಳಿಸಿತ್ತು. ಕಮಲ ಪಾಳಯಕ್ಕೆ ಯಳಂದೂರಿನಲ್ಲಿ ಮಾತ್ರ ಕೊಂಚ ಹಿನ್ನಡೆಯಾಗಿದೆ. ಹೋದ ಸಲ 4 ವಾರ್ಡ್‌ಗಳಲ್ಲಿ ಗೆದ್ದಿದ್ದ ಅದು ಈ ಬಾರಿ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ.

ಖಾತೆ ತೆರೆಯಲುಬಿಎಸ್‌‍ಪಿ ವಿಫಲ
ಕೊಳ್ಳೇಗಾಲ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿರುವ ಬಿಎಸ್‌ಪಿಗೆ ಮೂರೂ ಕಡೆಗಳಲ್ಲಿ ಕನಿಷ್ಠ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

ಯಳಂದೂರು ಪಟ್ಟಣ ಪಂಚಾಯಿತಿಯ 10 ವಾರ್ಡ್‌ಗಳಲ್ಲಿ ಪಕ್ಷ ಅಭ್ಯರ್ಥಿಗಳನ್ನು ಹಾಕಿತ್ತು. ಗುಂಡ್ಲುಪೇಟೆಯಲ್ಲಿ ನಾಲ್ಕು ಹಾಗೂ ಹನೂರಿನಲ್ಲಿ ಒಬ್ಬರಿಗೆ ಟಿಕೆಟ್‌ ನೀಡಲಾಗಿತ್ತು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಯಳಂದೂರು ಬರುವುದರಿಂದ ಶಾಸಕ ಎನ್‌.ಮಹೇಶ್‌ ಸೇರಿದಂತೆ ಪಕ್ಷದ ಮುಖಂಡರು ಅಲ್ಲಿಗೆ ಹೆಚ್ಚು ಒತ್ತು ನೀಡಿದ್ದರು. ವ್ಯಾಪಕ ಪ್ರಚಾರವನ್ನೂ ನಡೆಸಿದ್ದರು. ಆದರೆ, ಪಟ್ಟಣದ ಜನರು ಬಿಎಸ್‌ಪಿ ಮೇಲೆ ಒಲವು ತೋರಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಗಳಿಸಲು ವಿಫಲವಾಗಿರುವ ಬಿಎಸ್‌ಪಿಗೆ, ಅದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಒಂದು ವಾರ್ಡ್‌ನಲ್ಲಿ ಗೆಲ್ಲಲು ಸಾಧ್ಯವಾಗದಿರುವುದು, ಪಕ್ಷಕ್ಕೆ ಆಗಿರುವ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.