ADVERTISEMENT

ಲಾಕ್‌ಡೌನ್‌ | ಮಾದಪ್ಪನ ಆದಾಯ ₹15 ಕೋಟಿ ಖೋತಾ

ಎರಡು ತಿಂಗಳಿಂದ ಬಾರದ ಭಕ್ತರು, ಅಭಿವೃದ್ಧಿ ಕೆಲಸಕ್ಕೆ ಆಗದ ತೊಂದರೆ

ಜಿ.ಪ್ರದೀಪ್ ಕುಮಾರ್
Published 26 ಮೇ 2020, 19:45 IST
Last Updated 26 ಮೇ 2020, 19:45 IST
ಭಕ್ತರಿಲ್ಲದೇ ಬಿಕೋ ಎನ್ನುತ್ತಿರುವ ಮಹದೇಶ್ವರಸ್ವಾಮಿ ದೇವಾಲಯ
ಭಕ್ತರಿಲ್ಲದೇ ಬಿಕೋ ಎನ್ನುತ್ತಿರುವ ಮಹದೇಶ್ವರಸ್ವಾಮಿ ದೇವಾಲಯ   

ಮಹದೇಶ್ವರ ಬೆಟ್ಟ: ಕೋವಿಡ್‌–19 ಕಾರಣಕ್ಕೆ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಎರಡು ತಿಂಗಳ ಅವಧಿಯಲ್ಲಿ ಇಲ್ಲಿನ ಮಹದೇಶ್ವರಸ್ವಾಮಿ ದೇವಾಲಯದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ₹15 ಕೋಟಿಗಳಷ್ಟು ನಷ್ಟವಾಗಿದೆ.

ಪವಾಡ ಪುರುಷ ಮಾದಪ್ಪನ ದರ್ಶನಕ್ಕೆ ಜಿಲ್ಲೆ, ರಾಜ್ಯ ಅಲ್ಲದೇ, ನೆರೆಯ ತಮಿಳುನಾಡು, ಕೇರಳ ಸೇರಿದಂತೆ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಬೇಸಿಗೆ ರಜಾ ಸಮಯದಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿರುವ ದೇವಾಲಯಗಳ ಪೈಕಿ ರಾಜ್ಯದಲ್ಲೇ ಹೆಚ್ಚು ಆದಾಯ ಗಳಿಸುವ ದೇವಾಲಯದ ಎಂಬ ಹೆಗ್ಗಳಿಕೆ ಇದಕ್ಕಿದೆ.

ಇತ್ತೀಚಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆದಾಯದಲ್ಲೂ ಗಣನೀಯ ಏರಿಕೆ ಕಂಡು ಬಂದಿತ್ತು. ಆದರೆ, ಮಾರ್ಚ್‌ 20ರಿಂದ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಭಕ್ತರಿಂದಾಗಿ ಬರುತ್ತಿದ್ದ ಆದಾಯ ಸಂಪೂರ್ಣ ನಿಂತಿದೆ.

ADVERTISEMENT

ಕೆಲವು ವರ್ಷಗಳಿಂದೀಚಿಗೆ ಪ್ರತಿ ತಿಂಗಳು ₹1.4 ಕೋಟಿಯಷ್ಟು ಆದಾಯ ಹುಂಡಿ ಕಾಣಿಕೆ ರೂಪದಲ್ಲಿ ಬರುತ್ತಿತ್ತು. ಜೊತೆಗೆ ಚಿನ್ನದ ತೇರು, ಹುಲಿವಾಹನ, ಬಸವ, ರುದ್ರಾಕ್ಷಿ ಮಂಟಪಗಳು, ಲಾಡು ಪ್ರಸಾದ, ಮುಡಿ, ವಸತಿ ಗೃಹ, ದರ್ಶನ ಶುಲ್ಕ, ಸಾರಿಗೆ ಸೇರಿದಂತೆ ವಿವಿಧ ಮೂಲಗಳಿಂದ ತಿಂಗಳಿಗೆ ₹6 ಕೋಟಿಯಿಂದ ₹8 ಕೋಟಿ ಆದಾಯ ಬರುತ್ತಿತ್ತು. ಅದಕ್ಕೆಲ್ಲವೂ ಈಗ ಕುತ್ತು ಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಕಾರ್ಯಧರ್ಶಿ ಜಯವಿಭವಸ್ವಾಮಿ ಅವರು, ‘ಮಾರ್ಚ್ 20ರಿಂದ ದೇವಾಲಯದ ಬಾಗಿಲನ್ನು ಮುಚ್ಚಿರುವುದರಿಂದ ಭಕ್ತಾದಿಗಳ ಬರುವಿಕೆ ಸಂಪೂರ್ಣ ನಿಂತು ಹೋಗಿದೆ. ಹಾಗಾಗಿ, ಆದಾಯ ಶೂನ್ಯವಾಗಿದೆ’ ಎಂದು ಹೇಳಿದರು.

ವೇತನ ಪಾವತಿ: ‘ಪ್ರಾಧಿಕಾರದಲ್ಲಿ ಖಾಯಂ 200 ಹಾಗೂ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 250 ಮಂದಿ ಇದ್ದಾರೆ. ಇದುವರೆಗೆ ಕಡಿತ ಮಾಡದೆ ಸಂಬಳ ನೀಡಲಾಗಿದೆ. ಪ್ರತಿ ತಿಂಗಳು ವೇತನಕ್ಕಾಗಿ ₹1.70 ಕೋಟಿಗೂ ಹೆಚ್ಚು ಹಣ ಬೇಕು. ಇದರ ಜೊತೆಗೆ ವಿದ್ಯುತ್‌ ಬಿಲ್ ನೀರು, ಸರಬರಾಜು ವೆಚ್ಚ, ಸ್ವಚ್ಚತೆ, ಇತರೆಗಳು ಖರ್ಚು ಸೇರಿದಂತೆ ₹2 ಕೋಟಿ ಖರ್ಚು ವೆಚ್ಚ ಇದೆ’ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ಕಾಮಗಾರಿ ಅಬಾಧಿತ

‘ಕಳೆದ ಎರಡು ತಿಂಗಳಿನಿಂದ ಆದಾಯ ಇಲ್ಲದಿರುವುದರಿಂದ ಸದ್ಯ ಈಗ ಪ್ರಾಧಿಕಾರದ ಸಾಮಾನ್ಯ ಖಾತೆಯಲ್ಲಿರುವ ಹಣವನ್ನು ಬಳಕೆ ಮಾಡಲಾಗುತ್ತಿದೆ’ ಎಂದು ಜಯವಿಭವಸ್ವಾಮಿ ಹೇಳಿದರು.

‘ಈ ಸಾಲಿನಲ್ಲಿ ಸುಮಾರು ₹80 ಕೋಟಿಯಿಂದ ₹90 ಕೋಟಿಯಷ್ಟು ಆದಾಯ ನಿರೀಕ್ಷಿಸಲಾಗಿತ್ತು. ಎರಡು ತಿಂಗಳು ₹15 ನಷ್ಟ ಆಗಿರುವುದರಿಂದ ಅಷ್ಟು ಆದಾಯ ಬರಲಾರದು’ ಎಂದು ಅವರು ಹೇಳಿದರು.

‘ಲಾಕ್‌ಡೌನ್‌ ಸಡಿಲಿಕೆಯ ನಂತರಪ್ರಾಧಿಕಾರದಲ್ಲಿ ಅಭಿವೃದ್ದಿ ಕೆಲಸಗಳು ಎಂದಿನಂತೆ ನಡೆಯುತ್ತಿದ್ದು ಅಭಿವೃದ್ದಿ ಕಾಮಗರಿಗಳಿಗೂ ಹಣದ ಕೊರತೆ ಇಲ್ಲ’ ಎಂದು ಹೇಳಿದರು.

ಅಂಕಿ ಅಂಶ
₹60.79 ಕೋಟಿ:
2017–18ನೇ ಸಾಲಿನ ಆದಾಯ
₹67.15 ಕೋಟಿ:2018–19ನೇ ಸಾಲಿನಲ್ಲಿ ದೇವಸ್ಥಾನದ ಆದಾಯ
₹73.75 ಕೋಟಿ:2019–20ನೇ ಸಾಲಿನ ಆದಾಯ

**
ಇನ್ನು ಐದು ತಿಂಗಳು ಲಾಕ್ ಡೌನ್ ಮುಂದುವರೆದರೂ ವೇತನ ಹಾಗೂ ವೆಚ್ಚಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
-ಜಯವಿಭವಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.