ADVERTISEMENT

ಚಾಮರಾಜನಗರ | ಲಾಕ್‌ಡೌನ್‌ ಪರಿಣಾಮ, ವಿದ್ಯುತ್‌ ಶುಲ್ಕ ಸಂಗ್ರಹಕ್ಕೂ ಹೊಡೆತ

ಮನೆ ಮನೆಗೆ ಬರುತ್ತಿದ್ದಾರೆ ಸಿಬ್ಬಂದಿ, ಶುಲ್ಕ ಪಾವತಿಸಲು ಅಧಿಕಾರಿಗಳ ಮನವಿ

ಸೂರ್ಯನಾರಾಯಣ ವಿ
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೋವಿಡ್‌ 19ರ ತಡೆಗೆ ಜಾರಿ ಮಾಡಲಾಗಿರುವ ಲಾಕ್‌ಡೌನ್‌ನಿಂದಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ವಿದ್ಯುತ್‌ ಶುಲ್ಕ ಸಂಗ್ರಹಕ್ಕೂ ಭಾರಿ ಹೊಡೆತ ಬಿದ್ದಿದೆ.

ಸ್ವಯಂ ಪ್ರೇರಿತರಾಗಿ ವಿದ್ಯುತ್‌ ಬಿಲ್‌ ಪಾವತಿಸುವಂತೆ ಸೆಸ್ಕ್‌ ಅಧಿಕಾರಿಗಳು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸೆಸ್ಕ್‌ನ ಎರಡು ಉಪವಿಭಾಗಗಳಿದ್ದು (ಚಾಮರಾಜನಗರ ಮತ್ತು ಕೊಳ್ಳೇಗಾಲ), ಮಾರ್ಚ್‌ ತಿಂಗಳ ವಿದ್ಯುತ್‌ ಶುಲ್ಕ ಕಾಲು ಭಾಗದಷ್ಟೂ ಸಂಗ್ರಹವಾಗಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ADVERTISEMENT

ಎರಡು ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸೆಸ್ಕ್‌ ಸಿಬ್ಬಂದಿ ಮನೆ ಮನೆಗೆ ಬರುತ್ತಿದ್ದು, ಸಾಧ್ಯವಿರುವವರು ವಿದ್ಯುತ್‌ ಶುಲ್ಕ ಪಾವತಿಸುವಂತೆ ಮನವಿ ಮಾಡುತ್ತಿದ್ದಾರೆ.

ಕೋವಿಡ್‌ ಕಾರಣದಿಂದ ಸೆಸ್ಕ್‌ ಸಿಬ್ಬಂದಿ ಮನೆ ಮನೆಗೆ ಬಂದ್‌ ಮೀಟರ್‌ ನೋಡಿ ಬಿಲ್‌ ಕೊಟ್ಟಿಲ್ಲ. ಹಾಗಾಗಿ, ಈಗ ಬಿಲ್‌ ಸಂಗ್ರಹಕ್ಕೆ ಮನೆಗೆ ಬರುತ್ತಿರುವ ಸಿಬ್ಬಂದಿ, ಸದ್ಯಕ್ಕೆ ಕಳೆದ ತಿಂಗಳಷ್ಟೇ ಬಿಲ್‌ ಪಾವತಿಸುವಂತೆ ಬಳಕೆದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಪಾವತಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

‘ಲಾಕ್‌ಡೌನ್‌ ಜಾರಿಯಲ್ಲಿ ಇದ್ದುದರಿಂದ ಕಳೆದ ತಿಂಗಳ ಬಿಲ್‌ ಅನ್ನು ಯಾರಿಗೂ ಕೊಟ್ಟಿಲ್ಲ. ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಬಂದಿರುವ ಬಿಲ್‌ಗಳ ಸರಾಸರಿ ಮೊತ್ತವನ್ನು ನೀಡುವಂತೆ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಕಳೆದ ತಿಂಗಳ ಬಿಲ್‌ ಕಡಿಮೆಯಾಗಿದ್ದು, ಗ್ರಾಹಕರು ಹೆಚ್ಚು ಬಳಸಿದ್ದರೆ, ಮುಂದಿನ ತಿಂಗಳಿನ ಬಿಲ್‌ನಲ್ಲಿ ಸರಿಮಾಡಲಾಗುವುದು’ ಎಂದು ಸೆಸ್ಕ್‌ನ ಚಾಮರಾಜನಗರ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಕೆಲವು ಕಡೆಗಳಲ್ಲಿ ಲಾಕ್‌ಡೌನ್‌ ಸಡಿಲ ಮಾಡಿರುವುದರಿಂದ ಬಿಲ್‌ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರ ಸೂಚಿಸಿದೆ. ಅದರಂತೆ ಸಿಬ್ಬಂದಿ ಮನೆ ಮನೆಗೆ ತೆರಳಿ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದಾರೆ. ಈ ತಿಂಗಳು ಗ್ರಾಹಕರು ಪೂರ್ಣ ಹಣ ಪಾವತಿಸಿದರೆ ಸಂತೋಷ. ಕನಿಷ್ಠ ತಮ್ಮ ಕೈಯಲ್ಲಿ ಇದ್ದಷ್ಟು ಕೊಟ್ಟರೂ ತೆಗೆದುಕೊಳ್ಳುತ್ತೇವೆ. ಆದರೆ, ಮುಂದಿನ ತಿಂಗಳಿನಿಂದ ಅವರು ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ನಿರ್ವಹಣೆ ಕಷ್ಟ: ‘ವಿದ್ಯುತ್‌ ಕೂಡ ಜೀವನಾವಶ್ಯಕ ಸಾಮಗ್ರಿಗಳ ಪಟ್ಟಿಯಲ್ಲಿ ಬರುತ್ತದೆ. ಸಂಸ್ಥೆಯು ಮುಂಗಡವಾಗಿಯೇ ವಿದ್ಯುತ್‌ ಸರಬರಾಜು ಮಾಡುತ್ತದೆ. ಗ್ರಾಹಕರು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ನಿರ್ವಹಣೆ ತುಂಬಾ ಕಷ್ಟವಾಗಲಿದೆ’ ಎಂದು ಹೇಳುತ್ತಾರೆ ಸೆಸ್ಕ್‌ ಅಧಿಕಾರಿಗಳು.

‘ಸಿಬ್ಬಂದಿ ವೇತನ, ಸಾರಿಗೆ ವ್ಯವಸ್ಥೆ, ನಿರ್ವಹಣೆ ಈ ಎಲ್ಲ ಖರ್ಚುಗಳನ್ನು ಗ್ರಾಹಕರು ಪಾವತಿಸುವ ಬಿಲ್‌ನಿಂದಲೇ ಭರಿಸಲಾಗುತ್ತದೆ. ಮಳೆಗಾಲ ಆರಂಭವಾಗುತ್ತಿದ್ದು, ಗಾಳಿ ಮಳೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಾಸ ಆಗುತ್ತದೆ. ಈ ಸಂದರ್ಭದಲ್ಲಿ ಬರುವ ಹೆಚ್ಚುವರಿ ಖರ್ಚಿಗೂ ಹಣ ಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ಅಥವಾ ಸಬ್ಸಿಡಿ ಹಣವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಹಾಗಾಗಿ, ಗ್ರಾಹಕರು ಪಾವತಿಸುವ ಬಿಲ್‌ ಅನ್ನೇ ಅವಲಂಬಿಸಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

ಈ ತಿಂಗಳ ಸಂಗ್ರಹ ಎಷ್ಟು?
ಚಾಮರಾಜನಗರ ವಿಭಾಗದಲ್ಲಿ ಪ್ರತಿ ತಿಂಗಳು ಸರಾಸರಿ ₹2.12 ಕೋಟಿ ಸಂಗ್ರಹವಾಗುತ್ತದೆ. ಈ ತಿಂಗಳು ಇದುವರೆಗೆ ₹13 ಲಕ್ಷ ಸಂಗ್ರಹವಾಗಿದೆ.

ವಾಣಿಜ್ಯ ಉದ್ದೇಶದ ವಿದ್ಯುತ್‌ ಸಂಪರ್ಕಗಳಿಂದಾಗಿ ಪ್ರತಿ ತಿಂಗಳು ₹1.25 ಕೋಟಿ ವಸೂಲು ಆಗುತ್ತಿದ್ದು, ಈ ತಿಂಗಳು ₹40 ಲಕ್ಷ ಆಗಿದೆ.

ಭಾಗ್ಯಜ್ಯೋತಿ ಯೋಜನೆಯ ಗ್ರಾಹಕರು ಪ್ರತಿ ತಿಂಗಳು ₹20 ಲಕ್ಷ ಬಿಲ್‌ ಪಾವತಿಸುತ್ತಾರೆ. ಈ ತಿಂಗಳು ಕೇವಲ ₹2000 ವಸೂಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.