ಚಾಮರಾಜನಗರ: ‘ರಾಷ್ಟ್ರೀಯ ಲೋಕ ಅದಾಲತ್ ಈಚೆಗೆ ಯಶಸ್ವಿಯಾಗಿ ನಡೆದ್ದು 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು, ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲು, ಸರ್ವರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಅದಾಲತ್ ನಡೆಸಲಾಯಿತು.
ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 3,271 ಪ್ರಕರಣ ಹಾಗೂ 98,160 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 1,01,431 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ನ್ಯಾಯಾಲಯದಲ್ಲಿ ದಾಖಲಾಗುವ ಮುನ್ನವೇ ಹೆಚ್ಚಿನ ವ್ಯಾಜ್ಯಪೂರ್ವ ಪ್ರಕರಣಗಳನ್ನು ಅದಾಲತ್ ಮೂಲಕ ಇತ್ಯರ್ಥಪಡಿಸಲಾಗಿದ್ದು ಜನರ ಸಮಯ ಹಾಗೂ ಹಣ ಉಳಿತಾಯವಾದಂತಾಗಿದೆ. ಉಭಯ ಪಕ್ಷಗಾರರ ನಡುವೆ ಬಾಂಧವ್ಯವೂ ಉಳಿದಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೊರೆಯೂ ತಗ್ಗಿದೆ ಎಂದರು.
ರಾಜಿಗೆ ಯೋಗ್ಯ ಪ್ರಕರಣಗಳನ್ನು ಅದಾಲತ್ ಮೂಲಕ ಪರಿಹರಿಸಿಕೊಳ್ಳುವಂತೆ ಜನಸಾಮಾನ್ಯರಿಗೆ ಕಾನೂನು ಸೇವಾ ಪ್ರಾಧಿಕಾರ ಅರಿವು ಮೂಡಿಸುತ್ತಿದೆ. ಕ್ಷುಲ್ಲಕ ವಿಚಾರಗಳಿಗೆ ನ್ಯಾಯಾಲಯಕ್ಕೆ ಅಲೆಯುವ ಬದಲು ಸಂಧಾನ ಮೂಲಕ ಬಗೆಹರಿಸಿಕೊಂಡು ನೆಮ್ಮದಿಯಿಂದ ಇರಬಹುದು ಎಂದು ನ್ಯಾಯಾಧೀಶೆ ಪ್ರಭಾವತಿ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಈ ಬಾರಿಯ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ನಾಲ್ಕು ಜೋಡಿಗಳ ಮನವೊಲಿಸಲಾಗಿದ್ದು ಒಟ್ಟಾಗಿ ಬಾಳುವಂತೆ ತಿಳಿ ಹೇಳಲಾಗಿದೆ.ಜಿ. ಪ್ರಭಾವತಿ ಜಿಲ್ಲಾ ನ್ಯಾಯಾಧೀಶೆ
‘₹16.15 ಕೋಟಿ ಪರಿಹಾರ’
ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ಪೈಕಿ ಚಾಮರಾಜನಗರ ನ್ಯಾಯಾಲಯದಲ್ಲಿದ್ದ 435 ಯಳಂದೂರು ತಾಲ್ಲೂಕಿನ ನ್ಯಾಯಾಲಯಗಳಲ್ಲಿದ್ದ 783 ಕೊಳ್ಳೇಗಾಲ ತಾಲ್ಲೂಕಿನ 1678 ಹಾಗೂ ಗುಂಡ್ಲುಪೇಟೆ ತಾಲೂಕಿನ 375 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು. ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ ಚಾಮರಾಜನರ ತಾಲ್ಲೂಕಿನ 64908 ಯಳಂದೂರು ತಾಲ್ಲೂಕಿನ 9524 ಕೊಳ್ಳೇಗಾಲ ತಾಲ್ಲೂಕಿನಲ್ಲಿ 15232 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 8496 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ದಂಡ ಹಾಗೂ ಪರಿಹಾರ ರೂಪದಲ್ಲಿ ₹ 7.51 ಕೋಟಿ ವ್ಯಾಜ್ಯಪೂರ್ವ ಪ್ರಕರಣಗಳಿಂದ ₹ 8.64 ಕೋಟಿ ಸೇರಿದಂತೆ ₹16.15 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ನ್ಯಾಯಾಧೀಶರಾದ ಪ್ರಭಾವತಿ ಹೇಳಿದರು. ಮೊದಲಬಾರಿಗೆ ಹಿಂದಿನ ಅದಾಲತ್‌ಗಳಿಗಿಂತ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ. ಲೋಕ್ ಅದಾಲತ್ ಯಶಸ್ಸಿಗೆ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ವಕೀಲರು ಕಕ್ಷಿದಾರರು ನ್ಯಾಯಾಧೀಶರು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಪೊಲೀಸ್ ಇಲಾಖೆ ಕಾರ್ಮಿಕ ಕಂದಾಯ ಅಬಕಾರಿ ತಂಬಾಕು ನಿಯಂತ್ರಣ ಘಟಕ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ನ್ಯಾಯಾಧೀಶರು ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.