
ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ರಾಜ್ಯದ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದೆ ಎಂದು ಹೇಳಲಾದರೂ, ಈ ಪಟ್ಟಿಯಲ್ಲಿ ಚಾಮರಾಜನಗರ ಕ್ಷೇತ್ರ ಇಲ್ಲ. ‘ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಹೆಚ್ಚಿರುವುದರಿಂದ ನಾಯಕರಿಗೆ ಟಿಕೆಟ್ ಅಂತಿಮಗೊಳಿಸಲಾಗಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಣೆ ಮಾಡಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. 11 ಮಂದಿ ಟಿಕೆಟ್‌ಗೆ ಲಾಬಿ ಮಾಡುತ್ತಿದ್ದಾರೆ.
ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಬಾಲರಾಜ್, ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ.ಎನ್.ಎಸ್.ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಸಚಿವ ಕೋಟೆ ಶಿವಣ್ಣ, ಸಂಸದರ ಮತ್ತೊಬ್ಬ ಅಳಿಯ ಹರ್ಷವರ್ಧನ್, ಮುಖಂಡ ವೆಂಕಟರಣಸ್ವಾಮಿ (ಪಾಪು), ನಿವೃತ್ತ ಐಎಫ್‌ಎಸ್ ಅಧಿಕಾರಿ ರಾಜು, ನಿರ್ದೇಶಕ ಎಸ್.ಮಹೇಂದರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಮುಖಂಡ ಲಕ್ಷ್ಮಣ್ ಟಿಕೆಟ್ ಆಕಾಂಕ್ಷಿಗಳು.
ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇತ್ತೀಚೆಗೆ ಅವರು ನಿಧನರಾಗಿದ್ದಾರೆ. ಅವರ ಪತ್ನಿ ವಾಣಿಯವರಿಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
ಹಿರಿಯ ಐಆರ್‌ಎಸ್ ಅಧಿಕಾರಿ, ಗುಂಡ್ಲುಪೇಟೆ ತಾಲ್ಲೂಕಿನ ಸವಕನಹಳ್ಳಿಪಾಳ್ಯದ ನಾರಾಯಣಸ್ವಾಮಿ ಅವರ ಹೆಸರೂ ಕೇಳಿಬರುತ್ತಿದೆ.
ಜೊತೆಗೆ, ‘ಪಕ್ಷ ಯಾರಿಗೆ ಬೇಕಾದರೂ ಟಿಕೆಟ್ ನೀಡಲಿ, ಆದರೆ ಸ್ಥಳೀಯರನ್ನು ಮಾತ್ರ ಪರಿಗಣಿಸಲಿ’ ಎಂಬ ಒತ್ತಾಯವೂ ಆಕಾಂಕ್ಷಿಗಳಿಂದ ಕೇಳಿ ಬಂದಿದೆ.
‘ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ಕಿರಿಯ ಅಳಿಯ ಡಾ.ಎನ್.ಎಸ್.ಮೋಹನ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಮೋಹನ್ ಅವರು ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಮಾಜಿ ಶಾಸಕ ಎಸ್.ಬಾಲರಾಜ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿ ಸೇರ್ಪಡೆಗೊಂಡಿದ್ದರು.
‘ಯಡಿಯೂರಪ್ಪ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು, ಲೋಕಸಭಾ ಟಿಕೆಟ್ ನೀಡಬೇಕು ಎಂಬ ಷರತ್ತಿನೊಂದಿಗೆ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ನಾಯಕರು ಕೂಡ ಒಪ್ಪಿದ್ದರು ಹಾಗಾಗಿ, ಅವರಿಗೆ ಟಿಕೆಟ್ ಸಿಗಲಿದೆ’ ಎಂಬ ನಿರೀಕ್ಷೆಯಲ್ಲಿ ಅವರ ಆಪ್ತರಿದ್ದಾರೆ. ಕೊಳ್ಳೇಗಾಲದ ಮಾಜಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರು ಬಾಲರಾಜ್ ಪರವಾಗಿದ್ದರೆ ಎಂದು ಹೇಳಲಾಗುತ್ತಿದೆ.
ರಾಜ್ಯ ನಾಯಕರು ಅಭಿಪ್ರಾಯ ಸಂಗ್ರಹಿಸಿದ್ದು ಸಂಭಾವ್ಯರ ಹೆಸರು ಶಿಫಾರಸು ಮಾಡಲಿದ್ದಾರೆ. ಸಂಸದೀಯ ಮಂಡಳಿ ಹೆಸರನ್ನು ಅಂತಿಮಗೊಳಿಸಲಿದೆ.-ಸಿ.ಎಸ್.ನಿರಂಜನ್ ಕುಮಾರ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಾಮರಾಜನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.