ADVERTISEMENT

ಚಾಮರಾಜನಗರ: ಆನೆಗೆ ಕಬ್ಬು ನೀಡಿದ್ದಕ್ಕೆ ಲಾರಿ ಚಾಲಕನಿಗೆ ₹75 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 12:29 IST
Last Updated 6 ಡಿಸೆಂಬರ್ 2022, 12:29 IST
ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಬ್ಬಿನ ಲಾರಿ
ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಬ್ಬಿನ ಲಾರಿ   

ಚಾಮರಾಜನಗರ: ನೆರೆಯ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಬಳಿ ಕಾಡಾನೆಗೆ ಕಬ್ಬು ನೀಡಿದ ಲಾರಿಯ ಚಾಲಕನಿಗೆ ಅಲ್ಲಿನ ಅರಣ್ಯ ಇಲಾಖೆ ₹75 ಸಾವಿರ ದಂಡ ಹಾಕಿದೆ.

ಇದೇ 3ರಂದು ಈ ಪ್ರಕರಣ ನಡೆದಿದೆ. ಚಾಲಕನನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿದ್ದರಾಜು ಎಂದು ಗುರುತಿಸಲಾಗಿದೆ.

‘ಕರೆಪಳ್ಳಂ ಚೆಕ್‌ಪೋಸ್ಟ್‌ನಿಂದ ಮೂರು ಕಿ.ಮೀ ದೂರದಲ್ಲಿ ಕಬ್ಬು ತುಂಬಿದ್ದ ಲಾರಿ ನಿಂತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಲಾರಿಯ ಚಾಲಕನು ರಾಷ್ಟ್ರೀಯ ಹೆದ್ದಾರಿ ಬಳಿ ಇದ್ದ ಕಾಡಾನೆಗೆ ನೀಡುವುದಕ್ಕಾಗಿ ಕಬ್ಬಿನ ಕಂತೆ ತೆಗೆದುಕೊಂಡು ಹೋಗುತ್ತಿದ್ದುದು ಕಂಡು ಬಂತು. ವಿಚಾರಣೆ ಮಾಡಿದಾಗ ಆನೆಗೆ ಕಬ್ಬು ನೀಡಿದ್ದನ್ನು ಚಾಲಕ ಒಪ್ಪಿಕೊಂಡರು. ಹಾನಸೂರು ವನಕೊಟ್ಟಂ ಉಪ ನಿರ್ದೇಶಕ ಅವರ ಆದೇಶದಂತೆ ಸಿದ್ದರಾಜು ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಅವರಿಂದ ₹75 ಸಾವಿರ ಅನುಪಾಲನಾ ಶುಲ್ಕ ಕಟ್ಟಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ’ ಎಂದು ತಮಿಳುನಾಡಿನ ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ADVERTISEMENT

ರಕ್ಷಿತಾರಾಣ್ಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವನ್ಯಪ್ರಾಣಿಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಇಲ್ಲ.

ಜಿಲ್ಲೆಯ ಗಡಿಭಾಗದ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಆನೆಗಳು ಕಬ್ಬಿನ ಲಾರಿಗಳನ್ನು ತಡೆದು, ಕಬ್ಬು ತಿನ್ನುವುದು ಸಾಮಾನ್ಯ. ಆನೆಗಳ ಕಾರಣದಿಂದ ಆಗಾಗ ವಾಹನಗಳ ಓಡಾಟಕ್ಕೆ ತಡೆಯಾಗಿ ಸಂಚಾರ ಅಸ್ತವ್ಯಸ್ತವೂ ಆಗುತ್ತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.