ADVERTISEMENT

ಚಾಮರಾಜನಗರ | ಲವ್ ಸ್ಟೋರಿ 1998 ಸಿನಿಮಾ 30ರಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 4:59 IST
Last Updated 16 ಡಿಸೆಂಬರ್ 2022, 4:59 IST
ನಾಗರಾಜ್‌ ತಲಕಾಡು
ನಾಗರಾಜ್‌ ತಲಕಾಡು   

ಚಾಮರಾಜನಗರ: ಮೈಸೂರಿನ ಯಶ್ವಿನ್ ಸಿನಿ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ, ನಾಗರಾಜ್ ತಲಕಾಡು ನಿರ್ದೇಶಿಸಿರುವ ‘ಲವ್‌ಸ್ಟೋರಿ 1998’ ಚಲನಚಿತ್ರ ಇದೇ 30ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ಮಿಥುನ್‌ ನಾಯಕ ನಟನಾದರೆ, ನಾಯಕಿಯಾಗಿ ಅಭಿನಯಿಸಿರುವ ಕೃತಿಕಗೆ ಇದು ಎರಡನೇ ಸಿನಿಮಾ.

ಚಿತ್ರತಂಡ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ವಿವರಗಳನ್ನು ನೀಡಿತು.

ADVERTISEMENT

ನಿರ್ದೇಶಕ ನಾಗರಾಜ್‌ ತಲಕಾಡು ಮಾತನಾಡಿ ‘ಮೈಸೂರಿನ ತಂಡವೇ ಸೇರಿ ಮಾಡಿರುವ ಅಪ್ಪಟ ಕನ್ನಡ ಚಿತ್ರ ಇದು. ನೈಜ ಘಟನೆ ಆಧರಿಸಿದ, ಪ್ರೀತಿಯ ಕಥಾ ಹಂದರ ಇದರಲ್ಲಿದೆ. ಬಿ.ಇಡಿ ಕಾಲೇಜಿನ ಪ್ರೇಮಕಥೆ ಚಿತ್ರದ ಹೂರಣ. ಅಶ್ಲೀಲ ಸಂಭಾಷಣೆ ಇದರಲ್ಲಿಲ್ಲ. ಕುಟುಂಬ ಸಮೇತರಾಗಿ ಎಲ್ಲರೂ ನೋಡಬಹುದಾದ ಚಿತ್ರವನ್ನು ಮಾಡಿದ್ದೇವೆ’ ಎಂದರು.

ಮಂಡ್ಯ, ಮೈಸೂರು, ನಂಜನಗೂಡು ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಭಾವನೆಗಳು ಹಾಗೂ ಸಂಬಂಧಗಳಿಗೆ ಒತ್ತು ನೀಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿವೆ. ಈಗಾಗಲೇ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 30ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದ್ದು, ಎಲ್ಲರೂ ಸಿನಿಮಾ ನೋಡಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ನಾಯಕ ನಟ ಮಿಥುನ್‌ ಮಾತನಾಡಿ ‘ಇದು ನನ್ನ ಮೊದಲ ಸಿನಿಮಾ. ಹಿಂದೆ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದೆ. ಚಿತ್ರದ ಕಥೆಯು ಚೆನ್ನಾಗಿದ್ದು, ನನಗೆ ಹೊಸ ಅನುಭವ ನೀಡಿದೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಚಿತ್ರಕ್ಕೆ ಸಿನಿಪ್ರಿಯರ ಪ್ರೋತ್ಸಾಹಬೇಕು’ ಎಂದರು.

ನಾಯಕ ನಟಿ ಕೃತಿಕ ಮಾತನಾಡಿ, ‘ನಾನು ಈ ಹಿಂದೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದು, ಇನ್ನೂ ಬಿಡುಗಡೆಯಾಗಿಲ್ಲ. ಲವ್‌ ಸ್ಟೋರಿ 1998 ಉತ್ತಮ ಕಥೆ ಹೊಂದಿದೆ. ಚಿತ್ರ ತಂಡ ನೀಡಿರುವ ತರಬೇತಿಯಿಂದಾಗಿ ಉತ್ತಮವಾಗಿ ನಟಿಸಲು ಸಾಧ್ಯವಾಗಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಚಿತ್ರ ನೋಡಬೇಕು’ ಎಂದು ಕೋರಿದರು.

ಚಿತ್ರದ ನಿರ್ಮಾಪಕ ಬಿ.ಕುಮಾರಸ್ವಾಮಿ, ನಟ ಹರೀಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.