ADVERTISEMENT

ಶಾಲೆಗಳಲ್ಲಿ ಸೋಮವಾರದಿಂದ ಚಿಣ್ಣರ ಕಲರವ

ಕೋವಿಡ್‌ ನಿಯಮ ಪಾಲನೆಗೆ ಅಧಿಕಾರಿಗಳ ಒತ್ತು; ಮಕ್ಕಳ ಸ್ವಾಗತಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:52 IST
Last Updated 25 ಅಕ್ಟೋಬರ್ 2021, 3:52 IST
ಸೋಮವಾರದಿಂದ ಕಿರಿಯ ಪ್ರಾಥಮಿಕ ಶಾಲೆಗಳ ಭೌತಿಕ ತರಗತಿ ಆರಂಭವಾಗುತ್ತಿರುವುದರಿಂದ ಚಾಮರಾಜನಗರದ ರಾಮಸಮುದ್ರ ಸರ್ಕಾರಿ ಶಾಲಾ ಆವರಣದಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಿ ಸ್ವಚ್ಛಗೊಳಿಸಲಾಯಿತು
ಸೋಮವಾರದಿಂದ ಕಿರಿಯ ಪ್ರಾಥಮಿಕ ಶಾಲೆಗಳ ಭೌತಿಕ ತರಗತಿ ಆರಂಭವಾಗುತ್ತಿರುವುದರಿಂದ ಚಾಮರಾಜನಗರದ ರಾಮಸಮುದ್ರ ಸರ್ಕಾರಿ ಶಾಲಾ ಆವರಣದಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಿ ಸ್ವಚ್ಛಗೊಳಿಸಲಾಯಿತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರದಿಂದ (ಅ.25) ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ (1ರಿಂದ 5ನೇ ತರಗತಿ) ಭೌತಿಕ ತರಗತಿಗಳು ಆರಂಭವಾಗಲಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಒಂದೂವರೆ ವರ್ಷಗಳ ಬಳಿಕ ಪುಟ್ಟ ಮಕ್ಕಳನ್ನು ಸ್ವಾಗತಿಸಲು ಸಕಲ ಸಿದ್ಧತೆ ನಡೆಸಿದೆ. ಮಕ್ಕಳು ಕೂಡ ಪೋಷಕರ ಅನುಮತಿ ಪಡೆದು ಶಾಲೆಗೆ ತೆರಳುವ ಉತ್ಸಾಹದಲ್ಲಿದ್ದಾರೆ.

ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ರಾಜ್ಯ ಸರ್ಕಾರವು ಭೌತಿಕ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ. ಮೊದಲ ವಾರ ಮಧ್ಯಾಹ್ನದವರೆಗೆ ಮಾತ್ರ ತರಗತಿಗಳು ಇರಲಿದ್ದು, ನ.2ರಂದು ಪೂರ್ಣ ಅವಧಿಯಲ್ಲಿ ತರಗತಿ ಆರಂಭವಾಗಲಿವೆ.

ADVERTISEMENT

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ 873 ಶಾಲೆಗಳಿವೆ. 1ರಿಂದ 5ನೇ ತರಗತಿವರೆಗೆ 59,111 ಮಕ್ಕಳು ಇದ್ದಾರೆ. ಚಾಮರಾಜನಗರದಲ್ಲಿ 20,571, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 12,160, ಹನೂರಿನಲ್ಲಿ 11,730, ಕೊಳ್ಳೇಗಾಲದಲ್ಲಿ 10,457, ಯಳಂದೂರು ತಾಲ್ಲೂಕಿನಲ್ಲಿ 4,993 ಮಕ್ಕಳಿದ್ದಾರೆ.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳ ಆವರಣವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ. ಭೌತಿಕ ತರಗತಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಡಿಎಂಸಿಯು ಪೋಷಕರೊಂದಿಗೆ ಸಭೆ ನಡೆಸಿ ಚರ್ಚಿಸಿದೆ. ಪೋಷಕರ ಅಭಿಪ್ರಾಯಗಳನ್ನು ಶಾಲೆಗಳ ಆಡಳಿತ ಮಂಡಳಿ ಸಂಗ್ರಹಿಸಿದೆ. ಶಾಲೆಗಳಲ್ಲಿ ಕೈಗೊಳ್ಳಲಾಗುತ್ತಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಸಭೆಯಲ್ಲಿ ವಿವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮೀಯ ಸ್ವಾಗತಕ್ಕೆ ಸೂಚನೆ: ಈ ಮಧ್ಯೆ ಒಂದೂವರೆ ವರ್ಷದ ನಂತರ ಶಾಲೆಗೆ ಬರುತ್ತಿರುವ ಮಕ್ಕಳನ್ನು ಆತ್ಮೀಯವಾಗಿ ಅದ್ಧೂರಿಯಾಗಿ ಬರಮಾಡಿಕೊಳ್ಳಬೇಕು ಎಂದು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಗಳ ಶಿಕ್ಷಕರಿಗೆ ಸೂಚಿಸಿದ್ದಾರೆ.

‘ಎಲ್ಲ ಪ್ರಾಥಮಿಕ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ರಂಗೋಲಿ ಬಿಡಿಸಿರಬೇಕು.ಕಪ್ಪುಹಲಗೆ ಮೇಲೆ ಬಣ್ಣದ ಸೀಮೆಸುಣ್ಣಗಳಿಂದ ಘೋಷಣೆಗಳನ್ನು ಬರೆದು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಬೇಕು. ಮಕ್ಕಳಿಗೆ ಸಿಹಿ ತಿಂಡಿಗಳನ್ನು ಕಡ್ಡಾಯವಾಗಿ ವಿತರಿಸಬೇಕು. ಶಾಲಾ ಪರಿಸರ ಸ್ವಚ್ಛತೆಯಿಂದ ಇದ್ದು ಮಕ್ಕಳ ಮನಸ್ಸಿಗೆ ಮುದ ನೀಡುವಂತಿರಬೇಕು ಎಂದು ಎಲ್ಲ ಶಾಲೆಗಳಿಗೆ ಸೂಚಿಸಿದ್ದೇನೆ’ ಎಂದು ಚಾಮರಾಜನಗರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಷರತ್ತುಗಳು: ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಆದರೆ, ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಪಡೆಯುವುದು ಕಡ್ಡಾಯ.

ಇದರ ಜೊತೆಗೆ, ಕೋವಿಡ್‌ ಹರಡುವಿಕೆ ತಡೆಗಾಗಿ ಹಲವು ಷರತ್ತು ಹಾಕಲಾಗಿದೆ. ಮಾಸ್ಕ್‌ ಧರಿಸುವುದು, ಕೋವಿಡ್‌ ರೋಗ ಲಕ್ಷಣ ತಪಾಸಣೆ, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ತರಗತಿಯಲ್ಲಿ ಗರಿಷ್ಠ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡಬೇಕು. ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಎರಡು ಡೋಸ್‌ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡಲಾಗಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವಂತಿಲ್ಲ. ಪ್ರತಿ ದಿನ ಕೊಠಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಮುನ್ನೆಚ್ಚರಿಕೆ ವಹಿಸಲು ಸಚಿವರ ಸೂಚನೆ

ಭೌತಿಕ ತರಗತಿ ಆರಂಭವಾಗುತ್ತಿರುವುದರಿಂದ, ಶಾಲೆಗಳಲ್ಲಿ ಕೋವಿಡ್‌ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಾಲಾ ಕೊಠಡಿಗಳು, ಪೀಠೋಪಕರಣಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿರಬೇಕು. ಕೊಠಡಿಯಲ್ಲಿ ದೈಹಿಕ ಅಂತರ ಕಾಪಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಅವರು ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಮಕ್ಕಳಿಂದ ಪೋಷಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು.

‘ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದರಿಂದ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ನೆಗಡಿ, ಕೆಮ್ಮು ಲಕ್ಷಣಗಳಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ. ಮಕ್ಕಳನ್ನು ಕಳುಹಿಸಲು ಭಯ ಬೇಡ, ಆದರೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಅವರು ಪೋಷಕರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.