ಚಾಮರಾಜನಗರ: ಹನೂರು ತಾಲ್ಲೂಕಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ಉಲ್ಬಣವಾಗದಂತೆ ಹಾಗೂ ರಾಸುಗಳು ಮರಣ ಹೊಂದದಂತೆ ತುರ್ತು ಕ್ರಮ ವಹಿಸಬೇಕು ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕುಡಿಯುವ ನೀರು, ಜಾನುವಾರುಗೆ ಮೇವಿನ ಲಭ್ಯತೆ ಹಾಗೂ ಪ್ರಕೃತಿ ವಿಕೋಪ ಎದುರಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, 14 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು 6 ರಾಸುಗಳು ಮೃತಪಟ್ಟಿವೆ.
ಸೋಂಕು ಹರಡಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಬೇಕು, ಸೋಂಕು ಕಾಣಿಸಿಕೊಂಡ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯ ಜಾನುವಾರುಗಳಿಗೆ ಚರ್ಮಗಂಟು ತಡೆ ಲಸಿಕೆ ಹಾಕಬೇಕು, ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಾದರೆ ನೆರೆ ಜಿಲ್ಲೆಯಿಂದ ಕರೆಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಮಂಜುನಾಥ್, ಚರ್ಮಗಂಟು ರೋಗ ಕಾಣಿಸಿಕೊಂಡ ಕೂಡಲೇ ಸೋಂಕಿತ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾಯಿಲೆ ಹತೋಟಿಗೆ ಬರುತ್ತಿದ್ದು ಸೋಂಕಿತ ದನಗಳು ಚೇತರಿಸಿಕೊಳ್ಳುತ್ತಿವೆ. ಮೃತ ರಾಸುಗಳಿಗೆ ಶೀಘ್ರ ಪರಿಹಾರ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಚರ್ಮಗಂಟು ರೋಗದ ವೈರಸ್ ಸೊಳ್ಳೆಗಳ ಮೂಲಕ ರಾಸುಗಳಿಗೆ ಹರಡುತ್ತದೆ. ಲಸಿಕೆ ಹಾಕಿಸಿಕೊಳ್ಳದ ಜಾನುವಾರುಗೆ ಸೋಂಕು ತಗುಲುವ ಅಪಾಯ ಹೆಚ್ಚಾಗಿರುತ್ತದೆ. ದೊಡ್ಡಿಯೊಳಗೆ ಹೆಚ್ಚು ದನಗಳನ್ನು ಒತ್ತೊತ್ತಾಗಿ ಕಟ್ಟುವುದರಿಂದ, ಅಶುಚಿತ್ವ ಹಾಗೂ ಸೊಳ್ಳೆಗಳು ಹೆಚ್ಚಾಗಿದ್ದರೆ ಚರ್ಮ ಗಂಟು ರೋಗ ಸುಲಭವಾಗಿ ಹರಡುತ್ತದೆ. ಹೈನುಗಾರರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಹನೂರು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ‘ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಪ್ರಸ್ತುತ ಹನೂರು, ಮಾರ್ಟಳ್ಳಿ, ಎಲ್ಲೆಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಳ್ಯದ ಬಯಲು, ಬಿದರಳ್ಳಿ, ಕಡಬೂರು, ಗೋಡೆಸ್ಟ್ ನಗರ, ಎಂ.ಟಿ ದೊಡ್ಡಿ, ಕಾರ್ಗೆರಿ ದೊಡ್ಡಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣ ಟ್ಯಾಂಕರ್ ನೀರು ಕೊಡಲಾಗುವುದು ಎಂದರು.
ಶಾಸಕರಾದ ಎಂ.ಆರ್. ಮಂಜುನಾಥ್ ಮಾತನಾಡಿ, ಹನೂರು ತಾಲ್ಲೂಕಿನ 48 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 52 ಕೊಳವೆಬಾವಿ ಕೊರೆಯಿಸಬೇಕಾಗಿದೆ. ಅಗತ್ಯವಿರುವ ಅನುದಾನ ಬಳಸಿಕೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಚಾಮರಾಜನಗರ ನಗರಸಭೆ ಎಂಜಿನಿಯರ್ ಪ್ರಕಾಶ್ ಮಾತನಾಡಿ, ನಗರದ 1,2,6,14 ಹಾಗೂ 15ನೇ ವಾರ್ಡ್‌ಗಳಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿಹೋಗಿದ್ದು ಮರುಪೂರಣಗೊಳಿಸಬೇಕಾಗಿದೆ. 276 ಬೋರ್‌ವೆಲ್‌ಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭ ಸಿಟ್ಟಿಗೆದ್ದ ಶಾಸಕ ಪುಟ್ಟರಂಗಶೆಟ್ಟಿ ನಗರಕ್ಕೆ 10 ದಿನಗಳಿಗೊಮ್ಮೆಯೂ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ಸಾರ್ವಜನಿಕರು ನೀರು ಕೊಡುವಂತೆ ದುಂಬಾಲು ಬೀಳುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಪುಣಜನೂರು ಹಾಗೂ ಗೇಟ್, ಕೋಳಿಪಾಳ್ಯ, ದೊಡ್ಡಮೂಡಹಳ್ಳಿ, ದೊಡ್ಡಮೋಳೆ, ಮೂಕನಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಿಲ್ಲಾಡಳಿತದಲ್ಲಿರುವ ವಿಪತ್ತು ನಿರ್ವಹಣಾ ನಿಧಿಯನ್ನು ಕುಡಿಯುವ ನೀರು ಪೂರೈಕೆಗೆ ನೀಡಬೇಕು ಎಂದು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮಾತನಾಡಿ, ಹನೂರು ತಾಲ್ಲೂಕಿನ ಹಲವೆಡೆ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಪ್ರಸ್ತುತ 15ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗೆ ವ್ಯಯ ಮಾಡಿರುವ ವೆಚ್ಚದ ವಿವರವನ್ನು ಅಧಿಕಾರಿಗಳು ಒದಗಿಸಬೇಕು ಎಂದರು.
ಎಸ್‌ಪಿ ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಶ್ರೀಪತಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಗದೀಶ್, ಪಶುಪಾಲನಾ ಇಲಾಖೆಯ ಜಾನುವಾರು ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ, ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಿವಣ್ಣ, ಉಪನಿರ್ದೇಶಕ ಡಾ.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ಹನೂರು ಇಒ ಉಮೇಶ್ ಸಭೆಯಲ್ಲಿ ಇದ್ದರು.
ಮಲೆ ಮಹದೇಶ್ವರ ವನ್ಯಧಾಮದ ಸುತ್ತಲಿನ ಗ್ರಾಮಗಳಲ್ಲಿ 1700ಕ್ಕೂ ಹೆಚ್ಚು ದೊಡ್ಡಿಗಳನ್ನು ಗುರುತಿಸಲಾಗಿದ್ದು ತಮಿಳುನಾಡು ದನಗಳನ್ನು ಸಾಕದಂತೆ ಕರಪತ್ರ ಹಂಚಿಕೆಮಾಡಲಾಗಿದೆ. ನಿಯಮ ಮೀರಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿಲಾಗಿದೆಭಾಸ್ಕರ್ ಡಿಸಿಎಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.