ADVERTISEMENT

ಚಾಮರಾಜನಗರ: ‘ಮಾದಾರಿ ಮಾದಯ್ಯ ನಾಟಕ ಮೈಲಿಗಲ್ಲು’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 3:10 IST
Last Updated 17 ನವೆಂಬರ್ 2025, 3:10 IST
ಚಾಮರಾಜನಗರದ ಸಂತ ಜೋಸೆಫರ ಶಾಲೆಯ ಆವರಣದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಬುಧವಾರ ರಂಗಪೂರ್ವ ಅವಲೋಕನ ಕಾರ್ಯಕ್ರಮ ನಡೆಯಿತು
ಚಾಮರಾಜನಗರದ ಸಂತ ಜೋಸೆಫರ ಶಾಲೆಯ ಆವರಣದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಬುಧವಾರ ರಂಗಪೂರ್ವ ಅವಲೋಕನ ಕಾರ್ಯಕ್ರಮ ನಡೆಯಿತು   

ಚಾಮರಾಜನಗರ: ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ರಚನೆಯ ಮಾದಾರಿ ಮಾದಯ್ಯ ನಾಟಕ ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಮೈಲಿಗಲ್ಲು ಎಂದು ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ ಅಭಿಪ್ರಾಯಪಟ್ಟರು.

ನಗರದ ಸಂತ ಜೋಸೆಫರ ಶಾಲೆಯ ಆವರಣದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ರಂಗಪೂರ್ವ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಟಕದಿಂದ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಪರಂಪರೆಯ ಬಗ್ಗೆ ಕುತೂಹಲ, ಹುಡುಕಾಟ ಸಂಶೋಧನೆ ಹೆಚ್ಚಾಯಿತು. ಜಾನಪದ ಮತ್ತು ಸಂಸ್ಕೃತಿ ಅಧ್ಯಯನದ ಬಗ್ಗೆ ಸಂಶೋಧನೆ ಪ್ರಾರಂಭವಾಯಿತು ಎಂದರು.

ಎಚ್.ಎಸ್.ಶಿವಪ್ರಕಾಶ್ ಮಾತನಾಡಿ ಮಾದಾರಿ ಮಾದಯ್ಯ ನಾಟಕದ ಮೂಲಕ ದಲಿತ ಪುರಾಣ, ಅಸ್ಮಿತೆ, ಚಿಂತನೆ, ಚಾರಿತ್ರಿಕ ನಾಯಕರು ಮತ್ತು ಸಾಂಸ್ಕೃತಿಕ ಪ್ರತಿಭಟನೆಯ ಮಾದರಿಯನ್ನು ಕಟ್ಟಿಕೊಡಲಾಗಿದೆ. 1990ರಲ್ಲಿ ಮಾದಾರಿ ಮಾದಯ್ಯ ನಾಟಕ ಮೊದಲ ಪ್ರಯೋಗವಾಗಿದ್ದು 35 ವರ್ಷಗಳು ತುಂಬಿದ ಬಳಿಕವೂ ಜಿಲ್ಲೆಯ ಯುವ ರಂಗಕರ್ಮಿ ಕಿರಣ್ ಗಿರ್ಗಿ ನಾಟಕವನ್ನು ರಂಗಕ್ಕೆ ತರುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಮಹದೇಶ್ವರರನ್ನು ಸಾಮಾಜಿಕ ಕಾರ್ಯಕರ್ತ, ಧರ್ಮ ಸಂಸ್ಥಾಪಕ ಎಂದು ಕರೆಯಬಹುದಾಗಿದೆ. ಕಲ್ಯಾಣ ಕ್ರಾಂತಿ, ವಚನ ಚಳವಳಿಯ ಆಶಯಗಳನ್ನು ನೆಲೆಗೊಳಿಸಲು ಅವರು ಹೋರಾಟ ಮಾಡಿದರು. ಅಂತವರ ಕಾವ್ಯವನ್ನು ತನ್ನದಾಗಿಸಿಕೊಂಡಿರುವ ಶಿವಪ್ರಕಾಶ್ ಹೊಸದಾಗಿ ನಾಟಕ ಸೃಷ್ಟಿ ಮಾಡಿದ್ದಾರೆ. ಇದು ಸೃಜನಶೀಲವೂ, ಪ್ರತಿಭಟನಾತ್ಮಕವೂ, ಪ್ರಗತಿಪರ, ಪ್ರಜಾ ಕಲ್ಯಾಣದ ಆಶಯಗಳ ಮರು ನಿರ್ಮಾಣವೂ ಆಗಿದೆ ಎಂದರು.

ನಾಟಕದ ಪಾತ್ರಧಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು. ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡಮಾದಯ್ಯ, ಯುವ ರಂಗಕರ್ಮಿ ಕಿರಣ್ ಗಿರ್ಗಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.