ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಪಿಸುತ್ತಿದೆ ‘ಮದ್ರಾಸ್‌ ಐ’

ಕಣ್ಣಿನ ತಪಾಸಣೆಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಎಡತಾಕುತ್ತಿರುವ ರೋಗಿಗಳು

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2023, 5:35 IST
Last Updated 18 ಆಗಸ್ಟ್ 2023, 5:35 IST
ಯಳಂದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ತಜ್ಞ ಸಿ.ಎಂ.ಜಗದೀಶ್ ಸಾರ್ವಜನಿಕರ ಕಣ್ಣು ತಪಾಸಣೆ ಮಾಡಿದರು
ಯಳಂದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ತಜ್ಞ ಸಿ.ಎಂ.ಜಗದೀಶ್ ಸಾರ್ವಜನಿಕರ ಕಣ್ಣು ತಪಾಸಣೆ ಮಾಡಿದರು    

ನಾ ಮಂಜುನಾಥಸ್ವಾಮಿ

ಚಾಮರಾಜನಗರ/ಯಳಂದೂರು: ವಾತಾವರಣದಲ್ಲಿ ಮಳೆ, ಉರಿ ಬಿಸಿಲು, ಹೆಚ್ಚಾದ ಉಷ್ಣಾಂಶ ಹಾಗೂ ಗಾಳಿ, ಚಳಿ ಏರುತ್ತಿರುವುದರ ನಡುವೆ ಜೊತೆ ಕಣ್ಣು ಬೇನೆ ಅಥವಾ 'ಮದ್ರಾಸ್ ಐ’ ಸೋಂಕು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿದಿನ ಹತ್ತಾರು ಮಕ್ಕಳು ಮತ್ತು ಪೋಷಕರು ಕಣ್ಣಿನ ತಪಾಸಣೆಗೆ ಆಸ್ಪತ್ರೆಗೆ ಬರುತ್ತಿದ್ದಾರೆ.

ADVERTISEMENT

ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರತಿ ದಿನ 10ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಈವರೆಗೆ 70ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಯಳಂದೂರು ತಾಲ್ಲೂಕಿನಲ್ಲಿ ಇದೇ ಪರಿಸ್ಥಿತಿ ಇದೆ. ಪ್ರತಿ ದಿನ 10ಕ್ಕೂ ಹೆಚ್ಚು ಕೆಂಗಣ್ಣು ರೋಗಿಗಳು ಚಿಕಿತ್ಸೆಯಾಗಿ ಬರುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಕಾಣುತ್ತಿಲ್ಲ ಎಂದು ಜಿಲ್ಲಾ ಸರ್ಜನ್‌ ಕೃಷ್ಣಪ್ರಸಾದ್‌ ಮಾಹಿತಿ ನೀಡಿದರು.  

ಹಲವು ಶಾಲೆಗಳ ಮಕ್ಕಳು ಕಣ್ಣು ಉರಿ, ಕಣ್ಣು ನೋವಿನ ಕಾರಣದಿಂದ  ಪ್ರತಿದಿನ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಮಕ್ಕಳಿಂದ ಪಾಲಕರಿಗೂ ವ್ಯಾಪಿಸುತ್ತಿದ್ದು, ಸಾರಿಗೆ ಬಸ್‌ಗಳಲ್ಲಿ ಹೆಚ್ಚಾದ ಜನ ದಟ್ಟಣೆ, ಸಾರ್ವಜನಿಕ ಸ್ಥಳಗಳಲ್ಲಿ ಅಶುಚಿತ್ವ, ವೈಯಕ್ತಿಕ ನೈರ್ಮಲ್ಯದ ನಿರ್ಲಕ್ಷದಿಂದ ಸೋಂಕಿನ ಪ್ರಮಾಣ ಏರಲು ಕಾರಣವಾಗಿದೆ.

‘ಮಳೆಗಾಲದಲ್ಲಿ ಕೆಮ್ಮು, ಶೀತ, ಜ್ವರ ಸಾಮಾನ್ಯ, ಆದರೆ, ಈ ಬಾರಿ ಮದ್ರಾಸ್ ಐ ವೈರಾಣು ಮಕ್ಕಳನ್ನು ಬಾಧಿಸುತ್ತಿದೆ. ಮುನ್ನೆಚ್ಚರಿಕೆ ವಹಿಸಿದರೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು’ ಎಂದು ಯಳಂದೂರು ಆಸ್ಪತ್ರೆಯ ನೇತ್ರ ತಜ್ಞ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.   

‘ಕಣ್ಣಿನಲ್ಲಿ ಮರಳು ಬಿದ್ದ ಹಾಗೆ ಭಾಸವಾಗುತ್ತದೆ. ಕೆರೆತವೂ ಇರುತ್ತದೆ. ಈ ಲಕ್ಷಣ ಕಂಡರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮಕ್ಕಳು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಹೆಚ್ಚಿನ ಸೋಂಕಿಗೆ ಒಳಗಾಗುತ್ತಿದ್ದು, ಗುಂಪಿನಲ್ಲಿ ಇರುವವರಿಗೆ ಸೋಂಕು ವೇಗವಾಗಿ ಹರಡುತ್ತದೆ. 4 ರಿಂದ 6 ದಿನಗಳ ತನಕ ಸೋಂಕು ಇದ್ದು, ನಿಧಾನವಾಗಿ ಕಡಿಮೆ ಆಗುತ್ತದೆ. ಸೋಂಕು ನಿವಾರಕ ಮಾತ್ರೆ, ರೋಗ ನಿರೋಧಕ ಹನಿ ಕೊಡಲಾಗುತ್ತದೆ’ ಎಂದು ಅವರು ವಿವರಿಸಿದರು. 

ರೋಗ ಬಾಧಿತ ಕಣ್ಣುಗಳು ಈ ರೀತಿ ಇರುತ್ತವೆ
ಡಾ.ಕೃಷ್ಣಪ್ರಸಾದ್

ಈ ಸಮಯದಲ್ಲಿ ಇದು ಸಾಮಾನ್ಯ. ಬಹುಬೇಗ ಹರಡುವ ರೋಗದ ಬಗ್ಗೆ ಆತಂಕ ಪಡಬೇಕಾಗಿಲ್ಲ. ಆದರೆ ಜನರು ಎಚ್ಚರಿಕೆಯಿಂದ ಇರಬೇಕು.

-ಡಾ.ಕೃಷ್ಣಪ್ರಸಾದ್‌ ಜಿಲ್ಲಾ ಸರ್ಜನ್‌

‘ಅಪಾಯಕಾರಿ ಅಲ್ಲ; ಎಚ್ಚರಿಕೆ ಇರಲಿ’

ಕಣ್ಣು ಗುಡ್ಡೆಯ ಊತ ರೆಪ್ಪೆ ಅಂಟಿಕೊಳ್ಳುವುದು ಕಣ್ಣಿನ ಬಣ್ಣ ಗುಲಾಬಿ ಇಲ್ಲವೇ ಕೆಂಪು ಬಣ್ಣಕ್ಕೆ ತಿರುಗುವುದು ಕಣ್ಣಿನಲ್ಲಿ ಅತಿಯಾಗಿ ನೀರು ಸೋರುವುದು ತುರಿಕೆ ಆಗುವುದು ಕಣ್ಣಿನ ನಿರಂತರ ಅಸ್ವಸ್ಥತೆ ರೋಗ ಲಕ್ಷಣಗಳು. ಮುನ್ನೆಚ್ಚರಿಕೆ ಕ್ರಮಗಳು: ಸೋಂಕಿತರ ಕೈ ಕುಲುಕಿದರೂ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಸೋಂಕಿತರ ಟವಲ್ ಬಟ್ಟೆ ಬಳಸದಿರುವುದು ಉತ್ತಮ. ‘ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕ ತಡೆಯಬೇಕು. ತಂಪು ಕನ್ನಡಕ ಬಳಸಬೇಕು. ಕಣ್ಣಿಗೆ ಹೆಚ್ಚು ಆಯಾಸ ಆಗದಂತೆ ನೋಡಿಕೊಳ್ಳಬೇಕು. ಸೋಂಕಿತ ವ್ಯಕ್ತಿ ಬಳಸಿದ ಟವೆಲ್ ಮತ್ತಿತರ ವಸ್ತು ಬಳಸದಿರುವುದು ಸೋಂಕಿತರು ಹೊರಗಡೆ ಹೋಗುವುದನ್ನು ತಪ್ಪಿಸಬೇಕು’ ಎಂದು ಡಾ.ಕೃಷ್ಣಪ್ರಸಾದ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.