ADVERTISEMENT

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:38 IST
Last Updated 19 ಫೆಬ್ರುವರಿ 2026, 2:38 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆದ ಮಹಾ ರಥೋತ್ಸವದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆದ ಮಹಾ ರಥೋತ್ಸವದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ   

ಮಹದೇಶ್ವರ ಬೆಟ್ಟ: ಕಣ್ಣು ಹಾಯಿಸಿದಷ್ಟು ದೂರ ಭಕ್ತ ಸಾಗರ. ಎಲ್ಲೆಡೆ ಅನುರಣಿಸಿದ ಉಘೇ ಉಘೇ ಮಾದಪ್ಪ ಉದ್ಘೋಷ...ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಬುಧವಾರ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಮಾದಪ್ಪನ ಮಹಾ ರಥೋತ್ಸವ ನೆರವೇರಿತು.

ಶಿವರಾತ್ರಿ ಜಾತ್ರಾ ಮಹೋತ್ಸವದ ಅಂತಿಮ ದಿನ ನಡೆದ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ರಥದಲ್ಲಿ ವಿರಾಜಮಾನವಾಗಿದ್ದ ಮಲೆ ಮಾದಪ್ಪನ ಉತ್ಸವ ಮೂರ್ತಿಯ ದರ್ಶನ ಪಡೆದು ಮಹದೇಶ್ವರನ ಸ್ಮರಣೆ ಮಾಡಿದರು.

ರಥೋತ್ಸವಕ್ಕೂ ಮುನ್ನ ಮಾದಪ್ಪನಿಗೆ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಬಳಿಕ ಮಾದೇಶ್ವರನ ಉತ್ಸವ ಮೂರ್ತಿಯನ್ನು ಬಿಳಿ ಆನೆಯ ಮಾದರಿಯ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಒಳ ಭಾಗದಲ್ಲಿ ಪೂಜೆ ನಡೆಸಲಾಯಿತು. ‌

ADVERTISEMENT

ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರು ಬೆಲ್ಲದ ಆರತಿಯನ್ನು ಹೊತ್ತು ಸಾಗಿದರು. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ರಥದ ಬಳಿ ತರಲಾಯಿತು. ಈ ವೇಳೆ ಮತ್ತೊಮ್ಮೆ ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಿ ಭವ್ಯರಥದಲ್ಲಿ ಪ್ರತಿಷ್ಠಾಪಿಸಲಾಯಿತು. 

ರಥಕ್ಕೆ ಬೆಲ್ಲದ ಆರತಿ ಎತ್ತಿ ಬೂದ ಕುಂಬಳಕಾಯಿ ಹೊಡೆದ ಬಳಿಕ ಮಹಾರಥೋತ್ಸವ ಚಾಲನೆ ನೀಡಲಾಯಿತು. ಈ ವೇಳೆ ನೆರದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ‌ದೇಗುಲದ ಪ್ರಾಂಗಣದಲ್ಲಿ ಒಂದು ಸುತ್ತುಹಾಕಿದ ರಥ 10.45ರ ಸುಮಾರಿಗೆ ಮೂಲಸ್ಥಾನ ಬಂದು ತಲುಪಿತು.

6.5 ಲಕ್ಷ ಲಾಡು ಪ್ರಸಾದ ಮಾರಾಟ: ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ 9 ರಿಂದ 10 ಲಕ್ಷ ಭಕ್ತರು ಭೇಟಿನೀಡಿರುವ ಅಂದಾಜು ಮಾಡಲಾಗಿದ್ದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ತಯಾರು ಮಾಡಲಾಗಿದ್ದ 6.5 ಲಕ್ಷ ಲಾಡುಗಳು ಮಾರಾಟವಾಗಿವೆ. ಲಾಡು ಪ್ರಸಾದ ಮಾರಾಟದಿಂದಲೇ ಮಾದಪ್ಪನ ಕ್ಷೇತ್ರಕ್ಕೆ ₹ 1.75 ಕೋಟಿ ಆದಾಯ ಬಂದಿದೆ.

ಕೊಂಡೋತ್ಸವ; ರಥೋತ್ಸವದ ಬಳಿಕ ಸಂಜೆ ಕ್ಷೇತ್ರದಲ್ಲಿ ನಡೆದ ಕೊಂಡೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಈ ಮೂಲಕ ಐದು ದಿನಗಳ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿತ್ತು.  

ಮಹಾ ರಥೋತ್ಸವದಲ್ಲಿ ಭಾವಹಿಸಿದ್ದ ಭಕ್ತಸಾಗರ

10 ಲಕ್ಷ ಭಕ್ತರು ಭೇಟಿ

2026ರ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಭಕ್ತರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. 10 ಲಕ್ಷ ಭಕ್ತರು ಕ್ಷೇತ್ರಕ್ಕೆ ಭೇಟಿನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಆರೂವರೆ ಲಕ್ಷದಷ್ಟು ಲಾಡು ಪ್ರಸಾದ ಮಾರಾಟವಾಗಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.