ಮಹದೇಶ್ವರ ಬೆಟ್ಟ: ಲಕ್ಷಾಂತರ ಭಕ್ತರು ಭೇಟಿ ನೀಡುವ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಸಮರ್ಪಕ ಶೌಚಾಲಯಗಳ ವ್ಯವಸ್ಥೆ ಇಲ್ಲದೆ ಭಕ್ತರು ಮುಜುಗರ ಅನುಭವಿಸುತ್ತಿದ್ದಾರೆ.
ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಿಂದ ದೇವಾಲಯದವರೆಗೆ ಮೂರು ಶೌಚಾಲಯಗಳಿದ್ದು ಸರ್ಕಾರಿ ಬಸ್ ನಿಲ್ದಾಣದಲ್ಲಿ ಎರಡು, ಮಾರ್ಕೆಟ್ ಆವರಣದಲ್ಲಿ ಒಂದು ಶೌಚಾಲಯ ಇದೆ. ಬಸ್ ನಿಲ್ದಾಣದಲ್ಲಿರುವ ಒಂದು ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಮಾರ್ಕೆಟ್‌ನಲ್ಲಿರುವ ಶೌಚಾಲಯಗಳಲ್ಲಿ ಬಾಗಿಲುಗಳು ಮುರಿದಿದ್ದು, ಉಪಯೋಗಕ್ಕೆ ಬಾರದಂತಾಗಿದೆ.
ಶೌಚಾಲಯಕ್ಕೆ ಬಾಗಿಲೇ ಇಲ್ಲದಿರುವುದರಿಂದ ಮಹಿಳಾ ಭಕ್ತರು ಇತ್ತ ಸುಳಿಯುವುದಿಲ್ಲ. ಈ ಶೌಚಾಲಯವನ್ನು ತಿಂಗಳ ಹಿಂದಷ್ಠೆ ದುರಸ್ತಿಗೊಳಿಸಲಾಗಿತ್ತು. ಬಾಗಿಲು ಹಾಗೂ ನಲ್ಲಿಗಳನ್ನು ಸರಿಪಡಿಸಲಾಗಿತ್ತು. ದುರಸ್ತಿಯಾದ ತಿಂಗಳಲ್ಲೇ ಬಾಗಿಲುಗಳು ಮುರಿದು ನಲ್ಲಿಯಿಂದ ನೀರು ಪೋಲಾಗುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ಶೌಚಾಲಯ ಬಳಕೆ ಮಾಡಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ ಎಂದು ದೂರುತ್ತಾರೆ ಭಕ್ತರು.
ಪ್ರಸಿದ್ಧ ಧಾರ್ಮಿಕ ಸ್ಥಳವಾದ ಮಾದಪ್ಪನ ಸನ್ನಿಧಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಕ್ಷೇತ್ರಕ್ಕೆ ಬಂದೊಡನೆ ಜಲ, ಮಲ ಬಾಧೆ ತೀರಿಸಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಾದಪ್ಪನ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಭಕ್ತರ ಕಾಣಿಕೆ ಸಂದಾಯವಾದರೂ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಶೌಚಾಲಯಗಳು ಇಲ್ಲದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಭಕ್ತರು.
‘ಮಲೆ ಮಹದೇಶ್ವರ ದೇವಸ್ಥಾನ ಪ್ರಾಧಿಕಾರ ಕೂಡಲೇ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಯಲ್ಲಿರುವ ಶೌಚಾಲಯಗಳನ್ನು ದುರಸ್ತಿಗೊಳಿಸಿ ಭಕ್ತರ ಬಳಕೆಗೆ ಅನುವು ಮಾಡಿಕೊಡಬೇಕು. ನಿಯಮಿತವಾಗಿ ಸ್ವಚ್ಛಗೊಳಿಸಿ ಶುಚಿತ್ವ ಕಾಪಾಡಿಕೊಳ್ಳಬೇಕು. ಶೌಚಾಲಯಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು’ ಎಂದು ಭಕ್ತ ಮಹೇಶ್ ಒತ್ತಾಯಿಸಿದ್ದಾರೆ.
ನಾಮಫಲಕವೇ ಇಲ್ಲ: ದೇವಸ್ಥಾನದ ಆವರಣದಲ್ಲಿರುವ ಶಿವದರ್ಶಿನಿ ಬಳಿ ಶೌಚಾಲಯ ಇದ್ದರೂ ನಾಮಫಲಕ ಇಲ್ಲ. ಭಕ್ತರೇ ಶೌಚಾಲಯ ಎಂದು ಅಂದಾಜಿಸಿ ಒಳಗೆ ಹೋಗಬೇಕು. ‘ಪುರುಷರು’, ‘ಮಹಿಳೆಯರು’ ಎಂಬ ಫಲಕಗಳು ಇಲ್ಲದೆ ಯಾವ ಕಡೆಗೆ ಹೋಗಬೇಕು ಎಂಬ ಗೊಂದಲ ಉಂಟಾಗುತ್ತಿದ್ದು ಮುಜುಗರ ಅನುಭವಿಸುವಂತಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೌಚಾಲಯದ ಹೊರಗೆ ಫಲಕ ಹಾಕದಷ್ಟು ಬೇಜವಾಬ್ದಾರಿ ತೋರುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮೂಲಸೌಕರ್ಯಗಳಲ್ಲಿ ಒಂದಾದ ಶೌಚಾಲಯ ವ್ಯವಸ್ಥೆಯನ್ನು ಸಮರ್ಪಕವಾಗಿ ಹಾಕಬೇಕು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಚಾಮರಾಜನಗರದಿಂದ ದರ್ಶನಕ್ಕೆ ಬಂದಿದ್ದ ಮಹೇಶ್ ಹಾಗೂ ಕುಟುಂಬ ಸದಸ್ಯರು ಮನವಿ ಮಾಡಿದರು.
ಕರೆ ಸ್ವೀಕರಿಸದ ಕಾರ್ಯದರ್ಶಿ
ಕ್ಷೇತ್ರದಲ್ಲಿ ಶೌಚಾಲಯಗಳ ಅವ್ಯವಸ್ಥೆಯ ಕುರಿತು ಪ್ರತಿಕ್ರಿಯೆ ಪಡೆಯಲು ಮಲೆ ಮಹದೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಗೆ ಕರೆ ಮಾಡಿದಾಗ ಲಭ್ಯರಾಗಲಿಲ್ಲ.
‘ಮೂಲಸೌಕರ್ಯ ಕಲ್ಪಿಸಿ’
ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ನೆರೆಯ ತಮಿಳುನಾಡು ಸಹಿತ ಹಲವೆಡೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಭಕ್ತರ ಅಗತ್ಯತೆಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ. ಇರುವ ಶೌಚಾಲಯಗಳಲ್ಲಿ ನಿರ್ವಹಣೆ ಕೊರತೆ ಎದ್ದುಕಾಣುತ್ತದೆ. ಮೂಲಸೌಕರ್ಯ ಕಲ್ಪಿಸುವ ಹೊಣೆ ಹೊತ್ತಿರುವ ಪ್ರಾಧಿಕಾರ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಮನೋಜ್ ಭಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.