ಮಹದೆಶ್ವರ ಬೆಟ್ಟ: ಮಲೆ ಮಾದಪ್ಪನ ಸನ್ನಿಧಿಯಲ್ಲಿ ಶುಕ್ರವಾರ ದೀಪಾವಳಿ ಜಾತ್ರಾ ಮಹೋತ್ಸವ ಆರಂಭವಾಯಿತು. ಮೊದಲ ದಿನ ಮಾದೇಶ್ವರನಿಗೆ ವಿಶೇಷ ಪೂಜೆ ಪುನಸ್ಕಾರ, ಉತ್ಸವಾದಿ ಸೇವೆಗಳು ನಡೆದವು.
ಮುಂಜಾನೆ ನುಸುಕಿನಲ್ಲಿ ಸ್ವಾಮಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ, ಗಂಧಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಸಹಿತ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ನಾಡಿನ ನಾನಾಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದು ‘ಉಘೇ ಉಘೇ ಮಾದಪ್ಪ’ ನಾಮಸ್ಮರಣೆ ಮಾಡಿದರು. ದರ್ಶನ ಮಾಡಿ ಉರುಳು ಸೇವೆ ಮಾಡಿ, ಪಂಜಿ ಸೇವೆ, ಧೂಪದ ಸೇವೆ, ರುದ್ರಾಕ್ಷಿ ವಾಹನ, ಬಸವ ವಾಹನ, ಹುಲಿವಾಹನ ಸೇವೆ ಸಲ್ಲಿಸಿ ಹರಕೆ ತೀರಿಸಿದರು.
ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತರು ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಧರ್ಮ ದರ್ಶನದ ಜೊತೆಗೆ ಹಣ ಪಾವತಿಸಿ ದೇವರ ದರ್ಶನ ಮಾಡುವ ವ್ಯವಸ್ಥೆ ಇತ್ತು.
ಪರುಷೆಗಳ ಪರು ಸೇವೆ: ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಮಾದೇಶ್ವರ ಸ್ವಾಮಿಗೆ ವಿಶೇಷ ಪರು ಸೇವೆ ನೆರವೇರಿಸಿದರು. ಆಯಾ ಗ್ರಾಮಗಳ ಮುಖಂಡರು ಗ್ರಾಮಸ್ಥರಿಂದ ಪಡೆದ ದೇಣಿಗೆಯಲ್ಲಿ ಸಾಮೂಹಿಕ ಅಡುಗೆ ಮಾಡಿ ಭಕ್ತರಿಗೆ ಸಾಮೂಹಿಕ ಪರು (ಊಟದ ವ್ಯವಸ್ಥೆ) ವ್ಯವಸ್ಥೆ ಮಾಡಿದ್ದರು. ಜಾತಿ, ಮತ, ಬೇಧವಿಲ್ಲದೆ ಭಕ್ತರು ಒಂದೆಡೆ ಕುಳಿತು ಸಹಭೋಜನ ಮಾಡಿದರು.
ಪರು ಸೇವೆಗೂ ಮುನ್ನ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಒಂದೆಡೆ ಇಟ್ಟು ಮಾದೇಶ್ವರನಿಗೆ ಮುಡಿಪಿಟ್ಟು ವಿಶೇಷ ಪೂಜೆ ಸಲ್ಲಿಸಿ ನಂತರ ಭಕ್ತರಿಗ ಬಡಿಸಲಾಯಿತು.
ಕಾಲ್ನಡಿಗೆಯಲ್ಲಿ ಭಕ್ತ ಸಾಗರ: ಕಾಲ್ನಡಿಗೆಯಲ್ಲಿ ಬಂದು ಮಾದಪ್ಪನ ದರ್ಶನ ಪಡೆಯುವುದು ಶ್ರೇಷ್ಠ ಎಂಬ ನಂಬಿಕೆ ಗಟ್ಟಿಯಾಗಿರುವುದರಿಂದ ಸಹಸ್ರಾರು ಭಕ್ತರು ನಾಡಿನ ಹಲವೆಡೆಗಳಿಂದ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ದೇವಾಲಯದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದೆ. ಕಾಲ್ನಡಿಗೆಯಲ್ಲಿ ಬಂದ ಭಕ್ತರಿಗೆ ದೇವರ ದರ್ಶನಕ್ಕೆ ನೇರವಾಗಿ ತೆರಳಲು ಅನುವು ಮಾಡಿಕೊಡಲಾಗಿದೆ.
ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು ಭಕ್ತರಿಗೆ ವಿಶೇಷ ದಾಸೋಹದ ವ್ಯವಸ್ಥೆ ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬಂದು ಹರಕೆ ತೀರಿಸಿದ ಭಕ್ತರು
ಕಡಲೆ ಸೇವೆ ಪವಾಡ ಪುರುಷನ ನೆಲೆಯಲ್ಲಿ ಹಲವು ಬಗೆಯ ಸೇವೆಗಳು ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದ್ದು ಅದರಂತೆ ದೀಪಾವಳಿ ಜಾತ್ರೆಯಲ್ಲೂ ಮುಂದುವರಿದಿವೆ. ಅದರಲ್ಲಿ ಕಡಲೆ ಸೇವೆಯು ಒಂದಾಗಿದ್ದು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಭಕ್ತರು ಈ ಸೇವೆಯನ್ನು ಹೆಚ್ಚಾಗಿ ಪಾಲಿಸಿಕೊಂಡು ಬಂದಿದ್ದಾರೆ. ಊರಿನ ಗ್ರಾಮಸ್ಥರು ದೇವಾಲಯಕ್ಕೆ ಬಂದು ಮಾದಪ್ಪನ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮರಳಿ ಊರಿಗೆ ಹೋಗುವ ಸಂದರ್ಭ ಕಡಲೆ ಸೇವೆ ನಡೆಯುತ್ತದೆ. ಕಡಲೆ ಬೆಲ್ಲ ಕೊಬ್ಬರಿ ಕೆಂಪು ಕಲ್ಲು ಸಕ್ಕರೆ ಇನ್ನಿತರ ವಸ್ತುಗಳನ್ನು ಮಿಶ್ರಣ ಮಾಡಿ ಪೂಜೆಗೈದು ಗ್ರಾಮಸ್ಥರೆಲ್ಲರೂ ಹಂಚಿಕೊಂಡು ಮಾದಪ್ಪನ ಮಹಾ ಪ್ರಸಾದ ಎಂದು ಮನೆಗೆ ಕೊಂಡೊಯ್ಯುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.