ADVERTISEMENT

ಮಾದಪ್ಪನ ಕ್ಷೇತ್ರದಲ್ಲಿ ಶೌಚಾಲಯಗಳ ಕೊರತೆ

ಸರತಿ ಸಾಲಿನಲ್ಲಿ ನಿಂತು ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ: ಆಕ್ರೋಶ ಹೊರಹಾಕಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 9:09 IST
Last Updated 18 ಅಕ್ಟೋಬರ್ 2025, 9:09 IST
ಮಲೆ ಮಹದೇಶ್ವರ ದೇವಸ್ಥಾನ ಬಳಿ ಸಾಮೂಹಿಕ ಶೌಚಾಲಯದ ದುರಸ್ತಿ ಕಾರ್ಯ ನಡೆಯುತ್ತಿರುವುದು
ಮಲೆ ಮಹದೇಶ್ವರ ದೇವಸ್ಥಾನ ಬಳಿ ಸಾಮೂಹಿಕ ಶೌಚಾಲಯದ ದುರಸ್ತಿ ಕಾರ್ಯ ನಡೆಯುತ್ತಿರುವುದು   

ಚಾಮರಾಜನಗರ: ಲಕ್ಷಾಂತರ ಭಕ್ತರು ಭೇಟಿನೀಡುವ, ನಾಡಿನ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಮಲೆ ಮಹದೇಶ್ವರನ ಕ್ಷೇತ್ರದಲ್ಲಿ ಶೌಚಾಲಯಗಳ ಕೊರತೆ ಕಾಡುತ್ತಿದ್ದು ಅವ್ಯವಸ್ಥೆಯ ವಿರುದ್ಧ ಭಕ್ತರು ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದಾರೆ. 

ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದ್ದರೂ ಭಕ್ತರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡದ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ನಾಡಿನ ಹಲವೆಡೆಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಬಂದಿದ್ದು  ಕ್ಷೇತ್ರದಲ್ಲಿರುವ ಬೆರಳೆಣಿಕೆ ಸಾರ್ವಜನಿಕ ಶೌಚಾಲಯಗಳಲ್ಲಿ ನಿತ್ಯ ಕರ್ಮಗಳನ್ನು ಮುಗಿಸಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದಕ್ಕೆ ಪೂರಕವಾಗಿ ಶೌಚಾಲಯದ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ದೇಗುಲದ ಅವ್ಯವಸ್ಥೆಯ ವಿರುದ್ಧ ಹಲವರಿಂದ ಟೀಕೆಗಳು ವ್ಯಕ್ತವಾಗಿವೆ. 

ಕ್ಷೇತ್ರದಲ್ಲಿರುವ ಸಮುದಾಯ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಕೆಲವು ಶೌಚಾಲಯಗಳನ್ನು ಮಾತ್ರ ತೆರೆಯಲಾಗಿದೆ. ಪರಿಣಾಮ ಭಕ್ತರು ಶೌಚಕ್ಕೆ ತಾಸುಗಟ್ಟಲೆ ಕಾಯಬೇಕಾಗಿದೆ. ಮಹಿಳೆಯರು ಮುಜುಗರ ಅನುಭವಿಸುತ್ತಿದ್ದಾರೆ, ಸಕ್ಕರೆ ಕಾಯಿಲೆಯಿಂದ ಬಳಲರುತ್ತಿರುವ, ಪದೇಪದೇ ಮೂತ್ರ ವಿಸರ್ಜನೆ ಮಾಡಬೇಕಾದ ರೋಗಿಗಳ ಪಾಡಂತೂ ಹೇಳತೀರದು ಎಂದು ಮಹಿಳೆಯರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಬೆರಳೆಣಿಕೆ ಸಮುದಾಯ ಶೌಚಾಲಯ:

ಮಲೆ ಮಹದೇಶ್ವರ ದೇವಸ್ಥಾನದ ರಾಜಗೋಪುರದ ಮುಂಭಾಗ, ಅಂತರಗಂಗೆ ಬಳಿ, ಬಸ್ ನಿಲ್ದಾಣ, ದೇವಸ್ಥಾನಕ್ಕೆ ತೆರಳುವ ಮಾರ್ಗ ಸೇರಿದಂತೆ ಐದಾರು ಸಮುದಾಯ ಶೌಚಾಲಯ ಮಾತ್ರ ಇವೆ. ದೀಪಾವಳಿ, ಯುಗಾದಿ, ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಅಮಾವಾಸ್ಯೆ ಪೂಜೆಯ ಸಂದರ್ಭ ಲಕ್ಷಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಭೇಟಿನೀಡಿದಾಗ ಶೌಚಾಲಯಗಳ ಸಮಸ್ಯೆ ಗಂಭೀರವಾಗುತ್ತದೆ.

ಭಕ್ತರ ದಟ್ಟಣೆ ಹೆಚ್ಚಿದ್ದಾಗ ದೇವರ ದರ್ಶನಕ್ಕೆ ಐದಾರು ತಾಸು ಸರತಿ ಸಾಲಿನಲ್ಲಿ ನಿಲ್ಲಬೇಕಾಗದ ಸಮಯದಲ್ಲಿ ಭಕ್ತರು ಸಮಸ್ಯೆ ಅನುಭವಿಸುತ್ತಾರೆ. ಸರತಿ ಸಾಲು ಬಿಡುವ ಹಾಗಿಲ್ಲ, ಶೌಚದ ಬಾಧೆ ತಡೆಯಲೂ ಸಾಧ್ಯವಾಗದೆ ಬಳಲುತ್ತಾರೆ. ಜಾತ್ರೆ ಉತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ದೇಗುಲಕ್ಕೆ ಸಮೀಪದಲ್ಲಿ ಮೊಬೈಲ್ ಶೌಚಾಲಯಗಳನ್ನು ಅಳವಡಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಮಹಿಳೆ ಅನಸೂಯಮ್ಮ.

ಮಲೆ ಮಹದೇಶ್ವರನ ಬೆಟ್ಟದಲ್ಲಿ ಬಾಗಿಲು ಮುಚ್ಚಿರುವ ಸಮುದಾಯ ಶೌಚಾಲಯ
ದೀಪಾವಳಿ ಜಾತ್ರೆಗೆ ಬರುವ ಭಕ್ತರಿಗೆ ಅನಾನುಕೂಲವಾಗದಂತೆ ತಾತ್ಕಾಲಿಕವಾಗಿ ಮೊಬೈಲ್ ಫೋನ್‌ ಶೌಚಾಲಯಗಳ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಶೌಚಾಲಯಗಳ ಶೀಘ್ರ ದುರಸ್ತಿ ಮಾಡಿಸಲಾಗುವುದು.
ಸಿ.ಟಿ.ಶಿಲ್ಪಾನಾಗ್ ಜಿಲ್ಲಾಧಿಕಾರಿ

‘ಮೂರು ದಿನಗಳಲ್ಲಿ ದುರಸ್ತಿ’ ಮಲೆ ಮಹದೇಶ್ವರ ಬೆಟ್ಟದಲ್ಲಿ ಶೌಚಾಲಯಗಳ ಕೊರತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಕ್ಷೇತ್ರದಲ್ಲಿ ಬಹಳಷ್ಟು ಶೌಚಾಲಯಗಳು ಹಾಳಾಗಿದ್ದರಿಂದ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಹಾಗಾಗಿ ಭಕ್ತರಿಗೆ ಅನಾನುಕೂಲವಾಗುತ್ತಿದ್ದು ಮೂರ್ನಾಲ್ಕು ದಿನಗಳಲ್ಲಿ ಶೌಚಾಲಯಗಳು ಭಕ್ತರ ಬಳಕೆಗೆ ಸಿಗಲಿವೆ ಅಲ್ಲಿಯವರೆಗೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.