
ಮಹದೇಶ್ವರ ಬೆಟ್ಟ: ‘ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ತಿರುಪತಿ ಮಾದರಿಯಲ್ಲಿ ನಿರ್ಮಾಣವಾಗುವ ಯಾತ್ರಿಕರ ಸರತಿ ಸಾಲಿನ ಸಂಕೀರ್ಣದ ಕಾಮಗಾರಿ ಅಚ್ಚುಕಟ್ಟಾಗಿ ನಡೆಯಬೇಕು, ಸುರಂಗ ಮಾರ್ಗದ ಬಳಿ ಮಳೆಯ ನೀರು ನಿಲ್ಲದಂತೆ ವ್ಯವಸ್ಥಿತವಾಗಿ ಮಾಡಬೇಕು’ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪೋಸ್ಟ್ ಆಫೀಸ್‌ನಿಂದ ಪರ (ಅಡುಗೆ) ಮಾಡುವ ಸ್ಥಳದವರೆಗೆ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು’ ಎಂದರು.
‘ಡಾರ್ಮೆಟರಿ ಹತ್ತಿರ ನಿರ್ಮಿಸಲಾಗುತ್ತಿರುವ ಹೈಟೆಕ್ ಶೌಚಾಲಯ, ₹ 10 ಕೋಟಿ ವೆಚ್ಚದಲ್ಲಿ ಡಾರ್ಮೆಟರಿ ಕಟ್ಟಡ, ದೀಪದ ಗಿರಿ ಒಡ್ಡಿನ ಬಳಿ ತಡೆಗೋಡೆ ಕಾಮಗಾರಿ, ಒಳ ಚರಂಡಿ ಹಾಗೂ ರಸ್ತೆ ನಿರ್ಮಾಣ, ರಿಟೇನಿಂಗ್ ವಾಲ್ ಕಾಮಗಾರಿ, ಸಾಲೂರು ಮಠದ ರಸ್ತೆ ಕಾಮಗಾರಿಗಳು ನಿಗದಿತ ಅವಧಿಗೆ ಪೂರ್ಣಗೊಳಿಸಿ ಭಕ್ತರ ಅನುಕೂಲಕ್ಕೆ ನೀಡಬೇಕು’ ಎಂದು ಸೂಚಿಸಿದರು.
ಇದಕ್ಕೂ ಮುನ್ನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೇಗುಲದ ಬಳಿ ನಡೆಯುತ್ತಿರುವ ತಿರುಪತಿ ಮಾದರಿ ₹ 45 ಕೋಟಿ ವೆಚ್ಚದ ಸರತಿ ಸಾಲಿನ ಸಂಕೀರ್ಣ, ಸುರಂಗ ಮಾರ್ಗ, ದುರಸ್ಥಿ ಹಂತದಲ್ಲಿರುವ ಶೌಚಾಲಯ, ₹ 9.3 ಕೋಟಿ ವೆಚ್ಚದ 6 ಕೂಡು ರಸ್ತೆಗಳ ನಿರ್ಮಾಣ, ₹ 95 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪಾವತಿಸಿ ಉಪಯೋಗಿಸುವ ಶೌಚಾಲಯಗಳು, ₹ 9.3 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣದ ಬಳಿ ನಿರ್ಮಿಸುತ್ತಿರುವ ಶೌಚ ಮತ್ತು ಸ್ನಾನ ಗೃಹ, ₹ 10 ಕೋಟಿ ವೆಚ್ಚದಲ್ಲಿ 30 ಜನರು ತಂಗುವ ಡಾರ್ಮೆಟರಿ, ₹7.8 ಕೋಟಿ ವೆಚ್ಚದಲ್ಲಿ ದೀಪದಗಿರಿ ಒಡ್ಡಿನಲ್ಲಿ ನಿರ್ಮಿಸಿರುವ ಮಹದೇಶ್ವರ ಪ್ರತಿಮೆಯ ಸುತ್ತಲಿನ ತಡೆಗೋಡೆ. ₹ 22 ಕೋಟಿ ವೆಚ್ಚದಲ್ಲಿ ಕಾಲ್ನಡಿಗೆಗೆ ಗ್ರಾನೈಟ್ ಮೆಟ್ಟಿಲುಗಳ ನಿರ್ಮಾಣ, ₹ 5 ಕೋಟಿ ವೆಚ್ಚದಲ್ಲಿ ತಪೋಭವನದಿಂದ ಲೋಕೋಪಯೋಗಿ ಇಲಾಖೆವರೆಗಿನ ರಸ್ತೆ, ₹ 1.4 ಕೋಟಿ ಸಾಲೂರು ಮಠದಿಂದ ಕಾವೇರಿ ಬ್ಯಾಂಕ್ ವರೆಗಿನ ರಸ್ತೆ ಮರು ಡಾಂಬರೀಕರಣ, ₹ 2.6 ಕೋಟಿ ವೆಚ್ಚದಲ್ಲಿ ಅಂಚೆ ಕಚೇರಿಯಿಂದ ಅಂತರಗಂಗೆ ಮಾರ್ಗವಾಗಿ ದೇವಾಲಯ ತಲುಪುವ ರಸ್ತೆಯ ಕಾಮಗಾರಿಗಳನ್ನು ಶಾಸಕರು ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯಧರ್ಶಿ ಚಂದ್ರಶೇಖರ್, ತಹಶೀಲ್ದಾರ್ ಚೈತ್ರಾ, ಲೋಕೋಪಯೋಗಿ ಇಲಾಖೆಯ ಇಇ ಕಿರಣ್ ಕುಮಾರ್, ಎಡಿಎಲ್‌ಆರ್ ನಟರಾಜು, ಸೆಸ್ಕ್ ಎಇಇ ರಂಗಸ್ವಾಮಿ, ಜೆಜೆಎಂ ಇಇ ಸುಧನ್ವ ನಾಗ್, ಆರ್‌ಎಫ್‌ಒ ಅರುಣ್ ಇದ್ದರು.
₹ 45 ಕೋಟಿ ವೆಚ್ಚದಲ್ಲಿ ತಿರುಪತಿ ಮಾದರಿ ಸರತಿ ಸಾಲಿನ ಸಂಕೀರ್ಣ ಭಕ್ತರ ಬಳಕೆಗೆ ಹೈಟೆಕ್ ಶೌಚಾಲಯ, ಸ್ನಾನಗೃಹಗಳ ನಿರ್ಮಾಣ ತಂಗಲು ಡಾರ್ಮೆಟರಿ ವ್ಯವಸ್ಥೆ; ರಸ್ತೆಗಳ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.