
ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರನ ಸನ್ನಿಧಿಗೆ ಭಾನುವಾರು ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ವಿವಿಧ ಪೂಜೆಗಳಲ್ಲಿ ಪಾಲ್ಗೊಂಡರು.
ಬೆಳಗಿನ ಜಾವ ಮಹದೇಶ್ವರನಿಗೆ ವಿವಿಧ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಾವಿರಾರು ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ಮಾದಪ್ಪನನ್ನು ಕಣ್ತುಂಬಿಕೊಂಡರು. ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪ, ಬಸವನ ಹುಲಿವಾಹನ, ಉರುಳು ಸೇವೆ, ಪಂಜಿನ ಸೇವೆ ನಡೆದು ನಂತರ ಚಿನ್ನದ ರಥೋತ್ಸವ ನಡೆಯಿತು.
ಇಂದು ಮಾದಪ್ಪನ ಮಹಾ ಜ್ಯೋತಿ:
ಕಡೆಯ ಕಾರ್ತಿಕ ಸೋಮವಾರ ಮಹಾ ಜ್ಯೋತಿ ನಡೆಯಲಿರುವ ಹಿನ್ನೆಲೆಯಲ್ಲಿ ಮಾದೇಶ್ವರ ಬೆಟ್ಟದಲ್ಲಿರುವ ದೀಪದಗಿರಿ ಒಡ್ಡು ಕಂಗೊಳಿಸುತ್ತಿದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಮಹಾಜ್ಯೋತಿ ಬೆಳಗಿಸುವುದು ಸಂಪ್ರದಾಯ. ಇದಕ್ಕೆ ಐತಿಹ್ಯವೂ ಇದೆ. ಉತ್ತರ ದೇಶದಿಂದ ಕತ್ತಲ ನಾಡಿಗೆ ಬಂದ ಮಾದೇಶ್ವರ ನಡುಮಲೆಗೆ ಬಂದು ತಾನು ಐಕ್ಯವಾಗುವ ಸ್ಥಳ ಹಾಗೂ ಸತ್ತಮುತ್ತಲ ಪ್ರದೇಶವು ಕತ್ತಲಿನಿಂದ ಕೂಡಿರುವುದನ್ನು ಗಮನಿಸಿ ಮಹಾಜ್ಯೋತಿ ಬೆಳಗಿದರು ಎಂಬ ಪ್ರತೀತಿ ಇದೆ. ಹಾಗಾಗಿ, ಇಂದಿಗೂ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ಮಹಾಜ್ಯೋತಿ ಬೆಳಗಿಸುತ್ತ ಬರಲಾಗಿದೆ.
ಬೇಡಗಂಪಣ ಸಮುದಾಯದ ವಿಧಿ–ವಿದಾನಗಳಂತೆ ಮಾದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಸಮೇತ ಮಹಾಜ್ಯೋತಿ ಬೆಳಗುವ ಸ್ಥಳಕ್ಕೆ ತಂದು ಪೂಜೆಗಳನ್ನು ನೆರವೇರಿಸಿದ ಬಳಿಕ ಮಹಾಜ್ಯೋತಿ ಬೆಳಗಿಸಲಾಗುತ್ತದೆ. ಮಹಾಜ್ಯೋತಿಯ ದರ್ಶನವನ್ನು ಪಡೆಯುವ ಭಕ್ತರು ಬೆಳಗಿನ ಜಾವ ಮಹಾಜ್ಯೋತಿ ನಂದಿದ ನಂತರ ಅಲ್ಲಿಯ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಮನೆಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.