ADVERTISEMENT

ಮಾದಪ್ಪನ ಕ್ಷೇತ್ರದಲ್ಲಿ ಬೆಳಗಿದ ‘ಮಹಾಜ್ಯೋತಿ’

ಮಹದೇಶ್ವರ ಬೆಟ್ಟ: ಕಡೆ ಕಾರ್ತಿಕ ಸೋಮವಾರದ ಸಂಭ್ರಮ, ಸ್ವಾಮಿಯ ದರ್ಶನ ಪಡೆದ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:05 IST
Last Updated 11 ಡಿಸೆಂಬರ್ 2023, 16:05 IST
ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರದಂದು ಬೆಳಿಗ್ಗೆ ನಡೆದ ಬೆಳ್ಳಿ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು
ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರದಂದು ಬೆಳಿಗ್ಗೆ ನಡೆದ ಬೆಳ್ಳಿ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು   

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನಡೆದವು. 

ರಾತ್ರಿ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಪವಾಡಪುರುಷ ಮಹದೇಶ್ವರ ಸ್ವಾಮಿಯ ಮಹಾ ಜ್ಯೋತಿಯನ್ನು ಬೆಳಗಲಾಯಿತು. 

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಅರ್ಚಕರು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾ ಜ್ಯೋತಿ ಬೆಳಗಿದರು. ಈ ಸಂದರ್ಭದಲ್ಲಿ ಭಕ್ತರು  ‘ಉಘೇ ಮಾದಪ್ಪ, ಮಾಯ್ಕಾರ ಮಾದಪ್ಪ...’ ಮುಂತಾದ ಘೋಷಣೆಗಳನ್ನು ಕೂಗಿದರು. 

ADVERTISEMENT

ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದ ರಾತ್ರಿ ಈ ಸೇವೆಯನ್ನು ನೆರವೇರಿಸಲಾಗುತ್ತದೆ. 

ಜ್ಯೋತಿ ಬೆಳಗುವುದಕ್ಕೂ ಮುನ್ನ, ದೇವಾಲಯದ ಒಳ ಆವರಣದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಒಳ ಆವರಣದಲ್ಲಿ ಉತ್ಸಮೂರ್ತಿಯನ್ನು ದೇವಾಲಯಕ್ಕೆ ಮೂರು ಬಾರಿ ಪ್ರದಕ್ಷಿಣೆ ಮಾಡಿಸಲಾಯಿತು. ನಂತರ ಮೆರವಣಿಗೆಯಲ್ಲಿ ಮೂರ್ತಿಯನ್ನು ದೀಪದಗಿರಿ ಒಡ್ಡುವಿಗೆ ಕೊಂಡು ಹೋಗಿ, ಅಲ್ಲಿ ಪ್ರತಿಷ್ಠಾಪಿಸಿದ ನಂತರ ಮಹಾ ಜ್ಯೋತಿ ಬೆಳಗಿಸಲಾಯಿತು. 

ಸಾವಿರಾರು ಭಕ್ತರ ಭೇಟಿ: ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ವಿವಿಧ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. 

ಎಣ್ಣೆ ಮಜ್ಜನ ಸೇವೆಯ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಬಳಿಕ ದರ್ಶನಕ್ಕೆ ಅನುವು ಮಾಡಲಾಯಿತು. 

ಭಕ್ತರ ಸಂಖ್ಯೆ ಜಾಸ್ತಿಯಾಗಿದ್ದರಿಂದ ₹300, ₹200, ₹100 ಶುಲ್ಕದ  ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉಚಿತವಾಗಿ ನೇರ ದರ್ಶನ ಹಾಗೂ ಅಂಗವಿಕಲರಿಗೆ ನಾಲ್ಕನೇ ಗೇಟಿನ ಮೂಲಕ ದರ್ಶನಕ್ಕೆ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ವ್ಯವಸ್ಥೆ ಮಾಡಿತ್ತು. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ನಿರಂತರ ಅನ್ನ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಭಕ್ತರು ಉರುಳು ಸೇವೆ, ಪಂಜಿನ ಸೇವೆ, ರುದ್ರಾಕ್ಷಿ ಮಂಟಪ, ಬಸವ ವಾಹನ, ಹುಲಿ ವಾಹನ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ ಇನ್ನಿತರ ಸೇವೆಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. 

ವಿಶೇಷ ಅಲಂಕಾರ: ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ವಿದ್ಯುತ್‌ ದೀಪಗಳಿಂದ, ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾಂಗಣದಲ್ಲೂ ಹೂವಿನ ಅಲಂಕಾರ ಆಕರ್ಷಕವಾಗಿತ್ತು. 

ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಒಳಾಂಗಣದಲ್ಲಿ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು

ಕತ್ತಲ ಪ್ರದೇಶದಲ್ಲಿ ಬೆಳಕು ಹರಿಸಿದ್ದ ಮಾದಪ್ಪ

ಮಹಾ ಜ್ಯೋತಿಯನ್ನು ಬೆಳಗಲಾಗುವ ದೀಪದಗಿರಿ ಒಡ್ಡು ದೇವಾಲಯದ ಆಗ್ನೇಯ ದಿಕ್ಕಿನಲ್ಲಿದೆ.  ಉತ್ತರ ದೇಶದಿಂದ ಕತ್ತಲ ರಾಜ್ಯಕ್ಕೆ ಬಂದ ಮಹದೇಶ್ವರರು ನಡುಮಲೆಗೆ ಬಂದು ತಾವು ಐಕ್ಯವಾಗುವ ಸ್ಥಳ ಹಾಗೂ ಸತ್ತಮುತ್ತಲ ಪ್ರದೇಶವು ಕತ್ತಲಿನಿಂದ ಕೂಡಿದ್ದರಿಂದ ಈ ಸ್ಥಳದಲ್ಲಿ ಜ್ಯೋತಿಯನ್ನು ಬೆಳಗಿಸಿ ಇಡೀ ಪ್ರದೇಶಕ್ಕೆ ಬೆಳಕು ಬೀಳುವಂತೆ ಮಾಡಿದ್ದರು ಎಂಬುದು ಭಕ್ತರ ನಂಬಿಕೆ.  ಪ್ರತಿ ವರ್ಷ ಕಾರ್ತಿಕ ಮಾಸದ ಕಡೆ ಸೋಮವಾರದಂದು ಮಾದಪ್ಪನ ಉತ್ಸವ ಮೂರ್ತಿಯನ್ನು ದೀಪದಗಿರಿ ಒಡ್ಡಿಗೆ ಮೆರವಣಿಗೆಯಲ್ಲಿ ಕೊಂಡು ಹೋಗಿ ಪೂಜೆ ಪುನಸ್ಕಾರ ನಡೆಸಿ ಮಹಾ ಜ್ಯೋತಿ ಬೆಳಗಿಸಲಾಗುತ್ತದೆ.  ಮಹಾ ಜ್ಯೋತಿಯ ದರ್ಶನ ಪಡೆದ ಭಕ್ತರು ಬೆಳಗಿನ ಜಾವ ಜ್ಯೋತಿ ಬೆಳಗಲು ಬಳಸಿದ ಎಣ್ಣೆಯನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಗಳಲ್ಲಿ ದೀಪ ಹಚ್ಚುವ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.