ADVERTISEMENT

ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಜಾತ್ರೆ ಇಂದಿನಿಂದ

ಅದ್ಧೂರಿಯಾಗಿ ನಡೆಯಲಿದೆ ದಸರಾ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:26 IST
Last Updated 20 ಸೆಪ್ಟೆಂಬರ್ 2025, 4:26 IST
ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೆ.20ರಿಂದ ಮಾದೇಶ್ವರ ಸ್ವಾಮಿಯ ಮಹಾಲಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ
ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೆ.20ರಿಂದ ಮಾದೇಶ್ವರ ಸ್ವಾಮಿಯ ಮಹಾಲಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ   

ಮಹದೆಶ್ವರ ಬೆಟ್ಟ: ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೆ.20ರಿಂದ ಮಹಾಲಯ ಜಾತ್ರಾ ಮಹೋತ್ಸವ ಹಾಗೂ ವಿಶೇಷ ಉತ್ಸವಾದಿಗಳಿಗೆ ಚಾಲನೆ ಸಿಗಲಿದೆ.

ಶನಿವಾರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು, ಭಾನುವಾರ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಸೇವೆ ಹಾಗೂ ಉತ್ಸವಾದಿಗಳು ನಡೆಯಲಿವೆ. ಸೋಮವಾರ ಶರನ್ನವರಾತ್ರಿ ಉತ್ಸವ ಆರಂಭವಾಗಲಿದ್ದು, ಪ್ರತಿದಿನ ರಾತ್ರಿ ಉಯ್ಯಾಲೋತ್ಸವ ನಡೆಯಲಿದೆ.

ಅ.1ರಂದು ಮಹಾನವಮಿ ಹಾಗೂ ಆಯುಧ ಪೂಜಾ ಕಾರ್ಯಕ್ರಮ ನೆರವೇರಲಿದ್ದು ಅಂದು ಸ್ವಾಮಿಗೆ ಅಲಂಕರಿಸುವ ಕಿರೀಟ, ಪಟ್ಟದ ಕತ್ತಿ, ರಾಜಮನೆತನದಿಂದ ಉಡುಗೊರೆಯಾಗಿ ಬಂದಿರುವ ಆಯುಧಗಳಿಗೆ ಪೂಜೆ ನೆರವೇರಲಿದೆ. ಅ.2ರಂದು ವಿಜಯ ದಶಮಿ ವಿಶೇಷ ಉತ್ಸವಾದಿಗಳು ನಡೆಯಲಿದ್ದು ಕುದುರೆ ವಾಹನೋತ್ಸವ, ದಶಮಿ ಪೂಜೆಯ ನಂತರ ಮಹಾ ನೈವೇದ್ಯ ನಡೆದು ಅದ್ದೂರಿ ತೆಪ್ಪೋತ್ಸವ ಜರುಗಲಿದೆ.

ADVERTISEMENT

ಮಹಾಲಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದ್ದು ಈಗಾಗಲೇ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ದೇವರ ದರ್ಶನಕ್ಕಾಗಿ ವಿಶೇಷ ಸರದಿ ಸಾಲು, ನಿರಂತರ ಅನ್ನ ದಾಸೋಹ ಕಲ್ಪಿಸಲಾಗಿದೆ.

ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಅನ್ನ ದಾಸೋಹಕ್ಕೆ ಅಗತ್ಯವಾದ ತರಕಾರಿಗಳು ಬಂದಿದ್ದು ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಶುಚಿ ಹಾಗೂ ರುಚಿಯಾದ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾಲಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಭಕ್ತರ ಅನುಕೂಲಕ್ಕಾಗಿ ರಾಜ್ಯ ಸಾರಿಗೆ ನಿಗಮದಿಂದ ಮೂರು ದಿನ ರಾಜ್ಯದ ನಾನಾ ಭಾಗಗಳಿಂದ 300ಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. 500 ಖಾಸಗಿ ವಾಹನಗಳು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಂಚರಿಸಲಿವೆ.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಮಾತನಾಡಿ, ಮಹಾಲಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಹಿರಿಯ ನಾಗರಿಕಕರಿಗೆ, ಅಂಗವಿಕಲರಿಗೆ ಗೇಟ್ ನಂಬರ್ 4ರಲ್ಲಿ ವ್ಯವಸ್ಥೆ ಮಾಡಲಾಗಿದೆ, ಶಿಫಾರಸು ಪತ್ರ ತರುವವರಿಗೆ ಗೇಟ್ ನಂಬರ್ 5ರಲ್ಲಿ ನೇರ ದರ್ಶನ ಇದೆ ಎಂದರು.

ಧರ್ಮ ದರ್ಶನ ಹಾಗೂ ₹500, ₹ 200 ಟಿಕೆಟ್‌ ಪಡೆದು ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡುವವರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದ್ದು ಮೂರು ದಿನಗಳ ಕಾಲ ಜರುಗುವ ವಿಶೇಷ ದಾಸೋಹದಲ್ಲಿ ಪೊಂಗಲ್, ಸಿರಿಧಾನ್ಯಗಳ ಖಾದ್ಯ, ಮಜ್ಜಿಗೆ ಹುಳಿ ಹಾಗೂ ಇತರೆ ಖಾದ್ಯಗಳನ್ನು ತಯಾರಿಸಲಾಗುವುದು ಎಂದರು.

- ಮಾದಪ್ಪನ ಹುಂಡಿಯಲ್ಲಿ ₹ 1.70 ಕೋಟಿ ಸಂಗ್ರಹ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿಗೆ ಭಕ್ತರು ಆ.20ರಿಂದ ಸೆ.17ರವರೆಗೆ ₹ 1.70 ಕೋಟಿ ಕಾಣಿಕೆ ಹಾಕಿದ್ದಾರೆ. ₹ 16624697 ಹುಂಡಿಯಲ್ಲಿ ಸಂಗ್ರಹವಾದರೆ ಇ ಹುಂಡಿಯ (ಯುಪಿಐ ಪಾವತಿ) ಮೂಲಕ 392123 ಕಾಣಿಕೆ ಸಂಗ್ರಹವಾಗಿದೆ. 30 ಗ್ರಾಂ ಚಿನ್ನ 1 ಕೆ.ಜಿ 100 ಗ್ರಾಂ ಬೆಳ್ಳಿಯನ್ನು ಭಕ್ತರು ದೇವರಿಗೆ ಅರ್ಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.