ADVERTISEMENT

ಭಕ್ತರಿಗೆ ದಾಸೋಹ, ಮೂಲಸೌಕರ್ಯ ಸಮರ್ಪಕವಾಗಿರಲಿ: ಸಚಿವ ಕೆ.ವೆಂಕಟೇಶ್ ಸೂಚನೆ

ಫೆ.14ರಿಂದ ಮಹಾ ಶಿವರಾತ್ರಿ ಜಾತ್ರೆ, ಮಾರ್ಚ್‌ 16ರಿಂದ ಯುಗಾದಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:54 IST
Last Updated 29 ಜನವರಿ 2026, 6:54 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಜಾತ್ರೆ ಪೂರ್ವಭಾವಿಯಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅಧಿಕಾರಿಗಳ ಸಭೆ ನಡೆಸಿದರು
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಜಾತ್ರೆ ಪೂರ್ವಭಾವಿಯಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅಧಿಕಾರಿಗಳ ಸಭೆ ನಡೆಸಿದರು   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.14ರಿಂದ 18ರವರೆಗೆ ಮಹಾ ಶಿವರಾತ್ರಿ ಜಾತ್ರೆ ಹಾಗೂ ಮಾರ್ಚ್ 16ರಿಂದ 19ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದ್ದು ಕ್ಷೇತ್ರಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಜಾತ್ರೆ ಪೂರ್ವಭಾವಿಯಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಸಚಿವರು ಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ವ್ಯವಸ್ಥಿತವಾಗಿ ಧಾರ್ಮಿಕ ಉತ್ಸವಗಳು ನಡೆಯಬೇಕು ಎಂದು ಸೂಚನೆ ನೀಡಿದರು.

ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಮರ್ಪಕ ಕುಡಿಯುವ ನೀರು, ಸ್ವಚ್ಚತೆ, ದಾಸೋಹ, ದರ್ಶನ, ನೆರಳಿನ ವ್ಯವಸ್ಥೆ, ಶೌಚಾಲಯಗಳು ಸೇರಿದಂತೆ ಅಗಶ್ಯ ಸೌಲಭ್ಯಗಳನ್ನು ಕಲ್ವಿಸಬೇಕು. ಬೆಳಿಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ ನಿರಂತರ ದಾಸೋಹ ವ್ಯವಸ್ಥೆ ಇರಬೇಕು. ಹಿರಿಯ ನಾಗರಿಕರು ದೇವರ  ದರ್ಶನ ಮಾಡಲು ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಬೇಕು.

ADVERTISEMENT

ಕೌದಳ್ಳಿಯಿಂದ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಮಾರ್ಗದುದ್ದಕ್ಕೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕು. ಬೆಟ್ಟದಲ್ಲಿ ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅರಣ್ಯ ರಕ್ಷಕರನ್ನು ಭದ್ರತೆಗೆ ನಿಯೋಜಿಸಬೇಕು. ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ 50 ಮಂದಿ ಗೃಹರಕ್ಷಕರನ್ನು ಭದ್ರತೆಗಾಗಿ ನಿಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಜಾತ್ರಾ ಸಂದರ್ಭ ಅಕ್ರಮ ಮದ್ಯ ಮಾರಾಟ ತಡೆಯುವ ಸಲುವಾಗಿ ತಾಳುಬೆಟ್ಟ ಹಾಗೂ ಪಾಲಾರ್‌ನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಬೇಕು. ಬಸ್‌ಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ತಪಾಸಣೆಗೊಳಪಡಿಸಿ ಅಕ್ರಮ ಮದ್ಯ ಸಾಗಾಟಕ್ಕೆ ತಡೆಯೊಡ್ಡಬೇಕು. ಜಾತ್ರೆ ಆರಂಭವಾಗುವ ಒಂದು ವಾರ ಮುಂಚಿತವಾಗಿ ಮತ್ತು ಜಾತ್ರೆ ಮುಗಿದ ಒಂದು ವಾರದವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು.

ತಾಳುಬೆಟ್ಟ ಹಾಗೂ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆದು ಭಕ್ತರಿಗೆ ಆರೋಗ್ಯ ಸೇವೆ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.

ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಹಾಗೂ ಇತರರು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.