ADVERTISEMENT

ಸರ್ಕಾರ ರಚನೆಗೆ ಮಹೇಶ್ ಕೂಡ ಕಾರಣ: ಸಚಿವ ರಮೇಶ್ ಜಾರಕಿಹೊಳಿ

ಸರ್ಕಾರ ಸುರಕ್ಷಿತವಾಗಿದೆ, ಭಿನ್ನಮತ ಇಲ್ಲ– ಕೊಳ್ಳೇಗಾಲದಲ್ಲಿ ರಮೇಶ್‌ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:50 IST
Last Updated 29 ಮೇ 2020, 16:50 IST
ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ   

ಚಾಮರಾಜನಗರ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ಮಾತ್ರ ಅಲ್ಲ; ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಕೂಡ ಕಾರಣಕರ್ತರು. ಅವರು ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ₹220 ಕೋಟಿ ಕೇಳುತ್ತಿದ್ದಾರೆ. ಅವರಿಗೆ ₹2,000 ಕೋಟಿ ಕೊಟ್ಟರೂ ಕಡಿಮೆ’ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

‘ಮಹೇಶ್‌ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಬೇಕು ಎಂದು ನಾನು ಷರತ್ತು ಹಾಕಿದ್ದೆ. ಆದರೆ, ಮಹೇಶ್‌ ಅವರೇ ಮಂತ್ರಿ ಸ್ಥಾನ ಬೇಡವೆಂದು, ನಮ್ಮ ಜೊತೆ ಇರುವುದಾಗಿ ಹೇಳಿದ್ದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಮೇಶ್ ಕತ್ತಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭೆ ಸೇರಿರುವ ಬಗ್ಗೆ ಕೊಳ್ಳೇಗಾಲದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಕತ್ತಿ ಅವರ ಮನೆಯಲ್ಲಿ ನಡೆದ ಪೂಜೆಯಲ್ಲಿ ಶಾಸಕರು ಭಾಗವಹಿಸಿದ್ದಾರೆ ಎಂಬ ಮಾಹಿತಿ ಇದೆ. ಅವರು ನನ್ನ ಸ್ನೇಹಿತರು. ಏನು ಅಸಮಾಧಾನ ಇದೆಯೋ ಗೊತ್ತಿಲ್ಲ. ಅವರೊಂದಿಗೆ ಮಾತನಾಡುತ್ತೇನೆ. ನಾವೆಲ್ಲರೂ ಒಟ್ಟಾಗಿದ್ದೇವೆ. ಶಾಸಕರು ಚರ್ಚಿಸಿದ ಮಾತ್ರಕ್ಕೆ ಭಿನ್ನಮತ ಇದೆ ಎಂದಲ್ಲ; ನಾವು ಕಾಂಗ್ರೆಸ್‌ನಲ್ಲಿದ್ದಾಗ ನಡೆದಿದ್ದು ಭಿನ್ನಮತ’ ಎಂದರು.

ADVERTISEMENT

‘ನಾನು ಯಡಿಯೂರಪ್ಪ ಅವರ ಪರವಾಗಿದ್ದೇನೆ. ಸರ್ಕಾರ ಸುರಕ್ಷಿತವಾಗಿದೆ. ಇನ್ನೂ ಮೂರು ವರ್ಷ ಅಧಿಕಾರ ನಡೆಸಲಿದೆ. ನಂತರದ ಚುನಾವಣೆಯಲ್ಲೂ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ’ ಎಂದರು.

ಕೆಲವು ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಇದೆಯಲ್ಲ ಎಂಬ ಪ್ರಶ್ನೆಗೆ, ‘ಅವರೆಲ್ಲ ಏಳೆಂಟು ಬಾರಿ ಶಾಸಕರಾಗಿದ್ದಾರೆ. ಮುಳುಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೇರುವಷ್ಟು ಮೂರ್ಖರಲ್ಲ ಎಂದುಕೊಂಡಿದ್ದೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.