ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.25ರಿಂದ ಆರಂಭವಾಗುವ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಕಾವೇರಿ ನದಿ ದಾಟಿ ತಾಲ್ಲೂಕಿನ ಬಸವನ ಕಡ ತಲುಪುತ್ತಿದ್ದಾರೆ.
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಫೆ.25ರಿಂದ ಐದು ದಿನ ನಡೆಯುವ ಮಹಾಶಿವರಾತ್ರಿ ಜಾತ್ರೆಗೆ ಸಾಗರೋಪಾದಿಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. ಲಕ್ಷಾಂತರ ಭಕ್ತರು ಕಾವೇರಿ ನದಿ ದಾಟಿ ಕಾಲ್ನಡಿಗೆಯಲ್ಲಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವರ್ಷದ ಮೊದಲನೆಯ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು, ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕ್ಷೇತ್ರಕ್ಕೆ ಬರುವ ಹೆಚ್ಚಿನ ಭಕ್ತರು ಪಾದಯಾತ್ರೆಯ ಮೂಲಕವೇ ಬರುವುದು ವಿಶೇಷ. ಇಷ್ಟಾರ್ಥ ಈಡೇರಿಕೆಗೆ ಹರಕೆ ಕಟ್ಟಿಕೊಂಡಿದ್ದ ಭಕ್ತರು ಹರಕೆ ತೀರಿಸಲು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ.
ಈ ವರ್ಷವೂ ಶಿವರಾತ್ರಿ ಜಾತ್ರೆಗೆ ಭಕ್ತರು ಕಾವೇರಿ ನದಿ ದಾಟಿ ಕಾಲ್ನಡಿಗೆಯಲ್ಲಿ ಬರುತ್ತಿದ್ದು ಬೆಂಗಳೂರು, ಕೋಲಾರ, ರಾಮನಗರ ಮುಂತಾದ ಜಿಲ್ಲೆಗಳಿಂದ ಭಕ್ತರು ಕಾಲ ಹರಿಯುವ ಕಾವೇರಿ ನದಿ ದಾಟಿ ಬರುತ್ತಿದ್ದಾರೆ. ಶನಿವಾರದಿಂದ ನದಿ ದಾಟುವ ಕಾರ್ಯ ಆರಂಭ ವಾಗಿದ್ದು, ಭಾನುವಾರದವರೆಗೂ ಮುಂದುವರಿಯಲಿದೆ. ಮೂರು ದಿನಗಳ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಪಾದಯಾತ್ರೆ ಆರಂಭಿಸಿರುವ ಭಕ್ತರು ಶನಿವಾರ ಕಾವೇರಿ ವನ್ಯಧಾಮದ ಸಂಗಮ ವಲಯದ ಮೂಲಕ ನದಿ ದಾಟಿ ಹನೂರು ವನ್ಯಜೀವಿ ವಲಯದ ಬಸವನಕಡ ಸ್ಥಳಕ್ಕೆ ತಲುಪಿದರು. ಕೆಲವು ಭಕ್ತರು ಪಾದಯಾತ್ರೆಯನ್ನು ಮುಂದುವರಿಸಿದರೆ ಕೆಲವರು ನದಿ ತೀರದಲ್ಲಿ ಶನಿವಾರ ಹಾಗೂ ಭಾನುವಾರ ವಿಶ್ರಾಂತಿ ಪಡೆದು ಸೋಮವಾರ ಬೆಳಿಗ್ಗೆ ಮತ್ತೆ ಪಾದಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.
‘ಕಾಲ್ನಡಿಗೆಯಲ್ಲಿ ಹೆಚ್ಚು ಜನರು ಬರುತ್ತಿರುವುದು ಸಂತಸದ ವಿಚಾರ’ ಎಂದು ಕನಕಪುರದ ಮಹದೇವಮ್ಮ ಪಾದಯಾತ್ರೆಯ ಅನುಭವವನ್ನು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡರು.
ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಶಾಗ್ಯ ಕಳ್ಳಿದೊಡ್ಡಿ ಗ್ರಾಮದಲ್ಲಿ ಮೂರು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಮನಗರ ಹಾಗೂ ಬೆಂಗಳೂರು ಜಿಲ್ಲೆಯ ದಾನಿಗಳು ಅರಣ್ಯದಿಂದ ಹೊರಗೆ ಶಾಮಿಯಾನ ಹಾಕಿ ಅಡುಗೆ ತಯಾರಿಸುತ್ತಿದ್ದಾರೆ.
ಶನಿವಾರ ಹಾಗೂ ಭಾನುವಾರ ದಿನದಂದು ಬರುವ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.
ಕಳೆದ ವರ್ಷ ಭಕ್ತರು ಪ್ಲಾಸಿಕ್ ಬಾಟಲಿ ಹಾಗೂ ಊಟದ ತಟ್ಟೆಗಳನ್ನು ನದಿ ತೀರ ಹಾಗೂ ಅರಣ್ಯದೊಳಗೆ ಎಲ್ಲೆಂದರಲ್ಲಿ ಎಸೆದಿದ್ದರು. ಇದನ್ನು ಗಮನಿಸಿ ನದಿ ತೀರ ಹಾಗೂ ದಾರಿಯುದ್ದಕ್ಕೂ ಅಲ್ಲಲ್ಲಿ ತ್ಯಾಜ್ಯವನ್ನು ಹಾಕಲು ಜಾಗವನ್ನು ಗುರುತಿಸಿ ತಾತ್ಕಾಲಿಕ ಕಸದ ಬುಟ್ಟಿಗಳನ್ನು ನಿರ್ಮಿಸಲಾಗಿದೆ.
ನದಿ ದಾಟಿ ಬರುವ ಭಕ್ತರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡುವುದರ ಜತೆಗೆ ಸಂಜೆ 6 ಗಂಟೆ ಬಳಿಕ ಪಾದಯಾತ್ರೆ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಶನಿವಾರ ಸಂಜೆ ನದಿ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೀಡು ಬಿಟ್ಟಿದ್ದು ಭಾನುವಾರ ಭಕ್ತರ ಸಂಖ್ಯೆ ದ್ವಿಗುಣಗೊಳ್ಳಲಿದೆ.
‘ಶಕ್ತಿ ಇರುವವರೆಗೂ ನಡೆದೇ ಬರುವೆ’
‘ಎಂಟು ವರ್ಷಗಳಿಂದ ಬರಿಗಾಲಿನಲ್ಲಿ ಮಾದಪ್ಪನ ಬೆಟ್ಟಕ್ಕೆ ನಡೆದುಕೊಂಡೇ ಹೋಗುತ್ತಿದ್ದೇನೆ. ಇದರಿಂದ ಜೀವನದಲ್ಲಿ ಎದುರಾದ ಕಷ್ಟಗಳೆಲ್ಲವೂ ಪರಿಹಾರವಾಗಿದೆ. ಶಕ್ತಿಯಿರುವವರೆಗೂ ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ಹೋಗುತ್ತೇನೆ. ಮೊದಲೆಲ್ಲ ಮನೆಯಲ್ಲೇ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದೆವು. ಆದರೆ, ಈಗ ಅಲ್ಲಲ್ಲಿ ದಾನಿಗಳು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದು ಕನಕಪುರದ ಮಹದೇವಮ್ಮ ತಮ್ಮ ಪಾದಯಾತ್ರೆಯ ಅನುಭವವನ್ನು ತಿಳಿಸಿದರು.
ಶಾಗ್ಯ ಗ್ರಾಮದ ಬಳಿ ಪಾದಯಾತ್ರಿಗಳಿಗಾಗಿ ನಿರ್ಮಿಸಿರುವ ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಕ್ತರು
ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಬಳಿ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಅಡುಗೆ ತಯಾರಿಸುತ್ತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.