ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರನ ಬೆಟ್ಟದಲ್ಲಿ ಅ.18ರಿಂದ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಐದು ದಿನಗಳ ಕಾಲ ನಡೆಯುವ ಅದ್ದೂರಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆಯಲಿದ್ದಾರೆ. ಕ್ಷೇತ್ರ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ಉತ್ಸವಕ್ಕೂ ಮುನ್ನವೇ ಸಹಸ್ರಾರು ಭಕ್ತರು ಬೀಡುಬಿಟ್ಟಿದ್ದಾರೆ.
ಮೊದಲ ದಿನವಾದ 18ರಂದು ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿವೆ. 19ರಂದು ಎಣ್ಣೆ ಮಜ್ಜನ ಸೇವೆ ಹಾಗೂ ಉತ್ಸವ ನೆರವೇರಲಿದೆ. 20ರಂದು ನರಕ ಚತುದರ್ಶಿ ಸಹಿತ ಉತ್ಸವಗಳು ನಡೆಯಲಿದ್ದು, 21ರಂದು ಅಮಾವಾಸ್ಯೆಯ ಪ್ರಯುಕ್ತ ಬೆಳಿಗ್ಗೆ 9 ಗಂಟೆಯ ನಂತರ ಹಾಲರುವೆ ಉತ್ಸವ ನಡೆಯಲಿದೆ.
22ರಂದು ಬೆಳಿಗ್ಗೆ 9 ಗಂಟೆಯ ನಂತರ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ ಜರುಗಲಿದ್ದು, ಬಳಿಕ ಗುರು ಬ್ರಹ್ಮೋತ್ಸವ, ಅನ್ನ ಬ್ರಹ್ಮೋತ್ಸವ ಹಾಗೂ ರಾತ್ರಿ ಮಹಾ ನೈವೇದ್ಯ ನಡೆಯಲಿದೆ. ಬಳಿಕ ಅದ್ದೂರಿ ತೆಪ್ಪೋತ್ಸವದ ಮೂಲಕ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಸ್ವಾಮಿಗೆ ಹಾಲರವಿ ಉತ್ಸವ: ದೀಪಾವಳಿ ಜಾತ್ರೆಯಲ್ಲಿ ಹಸಿರು ಸೀರೆಯುಟ್ಟ ಬಾಲೆಯರು ಹಾಲಹಳ್ಳದಿಂದ ಪೂಜೆ ಮಾಡಿ ಹಾಲರವಿ ಕಳಸವನ್ನು ತಲೆ ಮೇಲೆ ಹೊತ್ತು ಪಾದಯಾತ್ರೆಯ ಮೂಲಕ ದೇವಾಲಯ ತಲುಪಲಿದ್ದಾರೆ. ತಲತಲಾಂತರದಿಂದ ನಡೆದುಕೊ೦ಡು ಬ೦ದಿರುವ ಸಂಪ್ರದಾಯದಂತೆ ಸ್ಥಳೀಯ ಬೇಡಗಂಪಣರ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಈ ಸೇವೆಯಲ್ಲಿ ಭಾಗವಹಿಸುವುದು ವಿಶೇಷ.
ಹಾಲರವಿ ಉತ್ಸವಕ್ಕೆ ನಿಯೋಜಿತಗೊಂಡ ಬಾಲೆಯರು ಉಪವಾಸವಿದ್ದು ಮಡಿಯುಟ್ಟು ಬೆಳಿಗ್ಗೆ ಮಲೆ ಬೆಟ್ಟದಿಂದ 7 ಕಿ.ಮೀ ಅರಣ್ಯದೊಳಗೆ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳ ತಲುಪುಲಿದ್ದಾರೆ. ಮಂಗಳವಾದ್ಯ ಮೇಳದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮೆರವಣಿಗೆ ಬಂದು ಪಟ್ಟದ ಆನೆ, ಡೊಳ್ಳು ಕುಣಿತ, ಛತ್ರಿ ಚಾಮರಗಳೊಂದಿಗೆ ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿರುವ ನೀರನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವಿ ಉತ್ಸವ ಸಂಪನ್ನಗೊಳ್ಳಲಿದೆ.
ಹಾಲರವೆ ಹೊತ್ತ ಹೆಣ್ಣು ಮಕ್ಕಳು ತಂಬಡಿಗೇರಿ ಗ್ರಾಮದ ಮುಖ್ಯದ್ವಾರ ಪ್ರವೇಶಿಸುತ್ತಾರೆ. ಅಲ್ಲಿ ದೊಡ್ಡಪಾಲಿನ ಬೇಡಗಂಪಣ ಸಮುದಾಯದವರಿಂದ ಕತ್ತಿ ಪವಾಡ ನಡೆಯಲಿದೆ. ಇಬ್ಬರು ಕತ್ತಿಯನ್ನು ಹಿಡಿದು ನಿಂತರೆ, ಮತೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುವ, ಅವರ ಬೆನ್ನ ಮೇಲೆ ಬೇಡಗಂಪಣ ಸಮುದಾಯದ ಪ್ರಮುಖ ವ್ಯಕ್ತಿ ಕಾಲನ್ನಿಡುವ ದೃಶ್ಯ ರೋಮಾಂಚನಗೊಳಿಸುತ್ತದೆ. ಹೆಣ್ಣು ಮಕ್ಕಳು ನಡೆದು ಹೋಗುವ ಮಾರ್ಗದಲ್ಲಿ ದುಷ್ಟ ಶಕ್ತಿಗಳ ಕಣ್ಣು ಬೀಳದಂತೆ ಪವಾಡ ನಡೆಯುತ್ತದೆ ಎಂಬುದು ಪ್ರತೀತಿ.
ಕರ್ನಾಟಕ ಹಾಗೂ ತಮಿಳುನಾಡಿನ ಸಾರಿಗೆ ಸಂಸ್ಥೆಗಳು ಜಾತ್ರಾ ಮಹೋತ್ಸವದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿವೆ. ತಮಿಳುನಾಡಿನಿಂದ 150 ರಿಂದ 200 ಬಸ್, ಕೆಎಸ್‌ಆರ್‌ಟಿಸಿಯಿಂದ 450 ಬಸ್‌ಗಳನ್ನು ಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.