ADVERTISEMENT

ಮಹದೇಶ್ವರ ಬೆಟ್ಟ: ಸ್ವಾಮೀಜಿಗಳ ಸಂಬಂಧಿಕರಿಗೆ ಪಟ್ಟ ಬೇಡ

ಸಾಲೂರು ಮಠ ಉತ್ತರಾಧಿಕಾರಿ ನೇಮಕ, ಸ್ಥಳೀಯ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:42 IST
Last Updated 23 ಜುಲೈ 2020, 14:42 IST
18 ಗ್ರಾಮಗಳ ಮುಖಂಡರು ಮಹದೇಶ್ವರಬೆಟ್ಟದಲ್ಲಿ ಸಭೆ ನಡೆಸಿದರು
18 ಗ್ರಾಮಗಳ ಮುಖಂಡರು ಮಹದೇಶ್ವರಬೆಟ್ಟದಲ್ಲಿ ಸಭೆ ನಡೆಸಿದರು   

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ಈಗಿನ ಪೀಠಾಧ್ಯಕ್ಷ ಗುರುಸ್ವಾಮಿಗಳು ಹಾಗೂ ಸುಳ್ವಾಡಿ ವಿಷ ದುರಂತ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಮ್ಮಡಿ ಮಹದೇವಸ್ವಾಮಿ ಅವರ ಸಂಬಂಧಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಬಾರದು ಎಂಬ ನಿರ್ಣಯಕ್ಕೆ ಸ್ಥಳೀಯ ಮುಖಂಡರು ಬಂದಿದ್ದಾರೆ.

ಪಟ್ಟದ ಗುರುಸ್ವಾಮಿ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ, ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಸುತ್ತಮುತ್ತಲ 18 ಗ್ರಾಮಗಳ ಮುಖಂಡರು ಬುಧವಾರ ಬೆಟ್ಟದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ಇಬ್ಬರೂ ಸ್ವಾಮೀಜಿಗಳ ಸಂಬಂಧಿಗಳನ್ನು ಬಿಟ್ಟು, ಬೇರೆ ಅರ್ಹ ವ್ಯಕ್ತಿಯನ್ನು ಪೀಠಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒಮ್ಮತದ ನಿಲುವಿಗೆ ಮುಖಂಡರು ಬಂದಿದ್ದಾರೆ.

ADVERTISEMENT

ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಸಂಬಂಧ 2019ರ ಅಕ್ಟೋಬರ್‌ 28ರಂದು ಸಭೆ ನಡೆಸಿ ಉತ್ತರಾಧಿಕಾರಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ಬಿಜೆಪಿ ನಾಯಕಿ ಪರಿಮಳ ನಾಗಪ್ಪ, ವಕೀಲ ಶಶಿಬಿಂಬ, ಮುಖಂಡರಾದ ಪೊನ್ನಾಚಿ ಮಹಾದೇವಸ್ವಾಮಿ, ತೋಟೇಶ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು. ಸಮಿತಿಯು ಹಲವು ಸಭೆಗಳನ್ನು ನಡೆಸಿತ್ತು. ಆದರೆ ಇದುವರೆಗೂ ಉತ್ತರಾಧಿಕಾರಿ ಆಯ್ಕೆ ವಿಚಾರವಾಗಿ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಹಲಗ ತಂಬಡಿ, ದೇಗುಲದ ಧರ್ಮದರ್ಶಿ ಮಂಡಳಿಯ ಮಾಜಿ ಸದಸ್ಯ ನಾಗಪ್ಪ, ಮುಖಂಡರಾದ ಮಹಾದೇವಪ್ರಸಾದ್, ಮಹಾದೇವಪ್ಪ, ನಾಗಣ್ಣ, ಅಣ್ಣಯ್ಯ, ಕೆಂಪಣ್ಣ, ಮಾದಯ್ಯ ತಂಬಡಿ, ಗುರುಸ್ವಾಮಿ, ಗಂಗಾಧರ್, ವೀರಪ್ಪ, ಮಲ್ಲಿಕಾರ್ಜುನಪ್ಪ ಸೇರಿದಂದತೆ ಇನ್ನಿತರೆ ಮುಖಂಡರುಗಳು ಇದ್ದರು.

ಇಬ್ಬರಿಂದಲೂ ಪ್ರಯತ್ನ?
ಪಟ್ಟದ ಗುರುಸ್ವಾಮಿ ಹಾಗೂ ಇಮ್ಮಡಿ ಮಹದೇವಸ್ವಾಮಿ ಅವರ ಸಂಬಂಧಿಗಳು ಮಠದ ಉತ್ತರಾಧಿಕಾರಿಯಾಗಲು ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಬಂದ ಮೇಲೆ ಸಭೆ ನಡೆಸಲಾಗಿದೆ ಎಂದು ಕೆಲವು ಮುಖಂಡರು ಹೇಳಿದ್ದಾರೆ.

ಗ್ರಾಮಸ್ಥರಲ್ಲಿ ಇರುವ ಅನುಮಾನಕ್ಕೆ ಪೂರಕವಾಗಿ ಪಟ್ಟದ ಗುರುಸ್ವಾಮಿ ಸಾಲೂರು ಮಠದ ಸಂಪೂರ್ಣ ಆಸ್ತಿಯನ್ನು ತನ್ನ ಶಿಷ್ಯರೊಬ್ಬರಿಗೆ ವಿಲ್ ಮಾಡಿಟ್ಟಿದ್ದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಇದಕ್ಕೆ ಭಕ್ತರು ಹಾಗೂ ಮಠದ ಹಿತೈಷಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಸ್ವಾಮೀಜಿ ಅವರು ವಿಲ್‌ ಅನ್ನು ವಾಪಸ್‌ ಪಡೆದಿದ್ದರು.

ಮತ್ತೊಂದೆಡೆ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಇಮ್ಮಡಿ ಮಹದೇವಸ್ವಾಮಿ ತನ್ನ ಅನುಮತಿಯಿಲ್ಲದೇ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವುದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ಈ ಬೆಳವಣಿಗೆಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖಂಡರು, ಯಾವುದೇ ಕಾರಣಕ್ಕೂ ಇಬ್ಬರು ಸ್ವಾಮೀಜಿಗಳಿಗೆ ಬೇಕಾದವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.