ಮಹದೇಶ್ವರಬೆಟ್ಟ: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಾದಪ್ಪನ ಸನ್ನಿಧಿಯಲ್ಲಿ ಇಂದಿನಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತಿದ್ದು, ಐದು ದಿನಗಳ ಈ ಶಿವರಾತ್ರಿ ಮಹೋತ್ಸವಕ್ಕೆ ಕರ್ನಾಟಕ ರಾಜ್ಯವಲ್ಲದೆ ನೆರೆಯ ರಾಜ್ಯ ತಮಿಳುನಾಡಿನಿಂದಲೂ ಸಹ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.
ಭಕ್ತರು ತಮ್ಮ ಹರಕೆ ಹಾಗೂ ಕಾಣಿಕೆಯನ್ನು ಸ್ವಾಮಿಯ ಮುಡಿಗೇರಿಸಿ ಮಾದಪ್ಪನ ಕೃಪೆಗೆ ಪಾತ್ರರಾಗುವರು.
ದೇವಾಲಯಕ್ಕೆ ಬರುವ ಭಕ್ತರಿಗೆ ಸಕಲ ಸಿದ್ಧತೆಯನ್ನು ಕಲ್ಪಿಸಲು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ಮುಂದಾಗಿದೆ. ವಿಶೇಷ ದಾಸೋಹ ವ್ಯವಸ್ಥೆ ಸೇರಿದಂತೆ ರಾಜಗೋಪುರದ ಮುಂಭಾಗ ಹಾಗೂ ಕ್ಯೂ ಲೇನ್, ನೆರಳಿನ ವ್ಯವಸ್ಥೆ ಮಾಡಲಾಗಿದೆ. ದರ್ಶನ ಮಾಡುವ ವೇಳೆ ಭಕ್ತರ ನೂಕ ನುಗ್ಗಲು ತಡೆಗಟ್ಟಲು ಸರತಿ ಸಾಲು ನಿರ್ಮಾಣ ಮಾಡಲಾಗಿದ್ದು, ಹೆಚ್ಚುವರಿ ಲಾಡು ಕೌಂಟರ್ ತೆರೆಯಲಾಗಿದೆ.
ವಿವಿಧ ಕಡೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಇನ್ನಿತರ ಅಗತ್ಯ ಸೌಕರ್ಯ ಒದಗಿಸಲಾಗಿದ್ದು, ಮಹದೇಶ್ವರ ಬೆಟ್ಟದ ಸುತ್ತಲೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ದೇವಾಲಯದ ಸುತ್ತಲೂ ಮದುವಣಗಿತ್ತಿಯಂತೆ ಶೃಂಗರಿಸಿ ಜಾತ್ರೆಗೆ ಸಜ್ಜು ಮಾಡಲಾಗಿದೆ.
ಈಗಾಗಲೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದು, ಕಾಲ್ನಡಿಗೆಯಲ್ಲಿ ಬರುವಂತಹ ಭಕ್ತರಿಗೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಲಾಗಿದ್ದು, ನೇರವಾಗಿ ಪ್ರಸಾದವನ್ನು ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಲ್ಲಲ್ಲಿ ಭಕ್ತರು ತಂಗಲು ನೆರಳಿನ ವ್ಯವಸ್ಥೆಯನ್ನು ಪ್ರಾಧಿಕಾರದಿಂದ ಕಲ್ಪಿಸಲಾಗಿದೆ.
ದಾನಿಗಳಿಂದ ಸೇವೆ: ಮಹಾಶಿವರಾತ್ರಿ ಜಾತ್ರೆಗೆ ಕಾಲ್ನಡಿಗೆಯಲ್ಲಿ ಲಕ್ಷಾಂತರ ಭಕ್ತರು ಬರುತಿದ್ದು, ನದಿ ತೀರದಿಂದ ತಾಳುಬೆಟ್ಟದವರೆವಿಗೂ ದಾನಿಗಳು ಹಾಗೂ ಹರಕೆಯನ್ನು ಹೊತ್ತ ಭಕ್ತರು ಹಣ್ಣು ಹಂಪಲು, ಕುಡಿಯಲು ನೀರು, ಮಜ್ಜಿಗೆ, ಪಾನಕ, ಬಿಸ್ಕತ್, ಹಾಲು ಇನ್ನಿತರ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
‘ಪ್ರತೀ ವರ್ಷವೂ ಕೂಡಾ ಮಹದೇಶ್ವರ ಬೆಟ್ಟದವರೆಗೂ ಆಹಾರ ಹಣ್ಣು ಹಂಪಲುಗಳನ್ನು ನೀಡಲಾಗುತಿತ್ತು ಈ ವರ್ಷ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ತಾಳುಬೆಟ್ಟದಲ್ಲಿ ತಡೆ ಮಾಡಿದ್ದರಿಂದ ಎಲ್ಲಾ ದಾನಿಗಳೂ ತಾಳಬೆಟ್ಟದವರೆಗೆ ಹಾಗೂ ಒಂದೇ ಕಡೆ ಆಹಾರ ಪದಾರ್ಥಗಳನ್ನು ನೀಡುತಿದ್ದು, ತಿಂಡಿ ತಿನಿಸುಗಳು ಬೀದಿ ಪಾಲಾಗುತ್ತಿವೆ. ಸರ್ಕಾರ ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಮಾಡುವ ಹೆಸರಿನಲ್ಲಿ ಭಕ್ತರು ಹಾಗೂ ದಾನಿಗಳಿಗೆ ಬೇಸರವನ್ನು ತರಿಸುವಂತಹ ಕೆಲಸವನ್ನು ಮಾಡಿದೆ’ ಎಂದು ದಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ದೇವಾಲಯದ ಆವರಣದಲ್ಲಿ ಭಕ್ತರ ಬೀಡು: ಜಾತ್ರಾ ಮಹೋತ್ಸವ ಪ್ರಯುಕ್ತ ಐದು ದಿನಗಳ ಕಾಲ ಒಂದೊಂದು ಸೇವೆಗಳಲ್ಲಿ ಪಾಲ್ಗೊಳ್ಳುವ ಭಕ್ತರು, ದೇವಾಲಯದ ಆವರಣದ ಸುತ್ತಲೂ ರಜಾ ( ಕಸ ) ಹೊಡೆಯುವ ಭಕ್ತರು ಈಗಾಗಲೇ ದೇವಾಲಯ ಆವರಣಕ್ಕೆ ಬಂದು ಜಮಾಯಿಸಿದ್ದು, ಐದು ದಿನಗಳ ಕಾಲ ದೇವಾಲಯದ ಆವರಣದಲ್ಲೇ ಇದ್ದು ತಮ್ಮ ಹರಕೆ ಹಾಗೂ ಕಾಣಿಕೆಯನ್ನು ಸಲ್ಲಿಸಿ ಊರಿಗೆ ಮರಳುತ್ತಾರೆ.
ಪಾದಯಾತ್ರೆ ವಿಶೇಷ: ಮುದ್ದು ಮಾದಪ್ಪ ಎಂದೇ ಹೆಸರುವಾಸಿಯಾಗಿರುವ ಮಾದಪ್ಪನ ನೆಲೆಗೆ ಹಿಂದಿನಿಂದಲೂ ಕಾಲ್ನಡಿಗೆಯಲ್ಲಿ ಬರುವುದು ವಾಡಿಕೆಯಾಗಿದ್ದು, ಇದೊಂದು ರೀತಿಯಲ್ಲಿ ಹರಕೆಯನ್ನು ತೀರಿಸುವ ಪದ್ದತಿಯಾಗಿದೆ. ಊರಿನ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮದಲ್ಲಿ ಚಂದಾವನ್ನು ವಸೂಲು ಮಾಡಿ ಗ್ರಾಮದಿಂದ ಮಾದೇಶ್ವರ ಬೆಟ್ಟಕ್ಕೆ ಬರುವವರೆಗೆ ತಗುಲುವ ವೆಚ್ಚವನ್ನು ಭರಿಸುತಿದ್ದರು. ತಮ್ಮ ಗ್ರಾಮಕ್ಕೆ ಹಾಗೂ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಕಾಲ್ನಡಿಗೆಯಲ್ಲು ಬರುತಿದ್ದು, ಮಕ್ಕಳಾಗದವರು ಹಾಗೂ ಇನ್ನಿತರ ವಿಶೇಷ ಹರಕೆಯನ್ನು ಹೊತ್ತು ಬರುತ್ತಾರೆ. ಹರಕೆಗಳು ನಡೆದಿರುವ ನಿದರ್ಶನಗಳು ಇವೆ. ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆಯು ಇಂದು ಗಣನೀಯವಾಗಿ ಏರಿಕೆಯಾಗಿದೆ’ ಎಂದು ಮಾದೇಶ್ವರ ಸ್ವಾಮಿಯ ಭಕ್ತ ಸಮೂಹದ ಸದಸ್ಯರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.