ADVERTISEMENT

ಮಹದೇಶ್ವರ ಬೆಟ್ಟ: ₹18 ಕೋಟಿ ಆದಾಯ ಖೋತಾ

ಎರಡೂವರೆ ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಸೂರ್ಯನಾರಾಯಣ ವಿ
Published 4 ಜುಲೈ 2021, 19:30 IST
Last Updated 4 ಜುಲೈ 2021, 19:30 IST
ಸೋಮವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ದೇವಾಲಯದ ಮುಂಭಾಗ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ
ಸೋಮವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ದೇವಾಲಯದ ಮುಂಭಾಗ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ   

ಚಾಮರಾಜನಗರ: ಕೋವಿಡ್‌ ಎರಡನೇ ಅಲೆ ತಡೆಗಾಗಿ ಲಾಕ್‌ಡೌನ್‌ ಜಾರಿಗೊಳಿಸಿ, ದೇವಾಲಯಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದರಿಂದ ಜಿಲ್ಲೆಯ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ₹18ಕೋಟಿಗಳಷ್ಟು ಆದಾಯ ಖೋತಾ ಆಗಿದೆ.

ಏಪ್ರಿಲ್‌ 22ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಎರಡೂವರೆ ತಿಂಗಳ ಬಳಿಕ ಸೋಮವಾರದಿಂದ (ಜುಲೈ 5) ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಉತ್ಸವ, ಸೇವೆಗಳನ್ನು ಮಾಡಿಸಲು ಅವಕಾಶ ಇಲ್ಲ. ದಾಸೋಹ ವ್ಯವಸ್ಥೆ, ಲಾಡು ಪ್ರಸಾದ ವಿತರಣೆಯೂ ಇಲ್ಲ.

ಆದಾಯಕ್ಕೆ ಹೊಡೆತ: ‘ಪ್ರತಿ ತಿಂಗಳ, ಹುಂಡಿ ಕಾಣಿಕೆ ಹಾಗೂ ವಿವಿಧ ಸೇವೆಗಳಿಂದ ದೇವಾಲಯಕ್ಕೆ ₹7 ಕೋಟಿಯಷ್ಟು ಆದಾಯ ಬರುತ್ತದೆ. ಎರಡೂವರೆ ತಿಂಗಳ ಅವಧಿಯನ್ನು ಲೆಕ್ಕ ಹಾಕಿದರೆ ₹17ರಿಂದ ₹18 ಕೋಟಿಯಾಗುತ್ತದೆ. ಲಾಕ್‌ಡೌನ್‌ ಕಾರಣಕ್ಕೆ ಭಕ್ತರ ಪ್ರವೇಶ ನಿಷೇಧಿಸಿದ್ದರಿಂದ ಅಷ್ಟು ಆದಾಯ ಕೈತಪ್ಪಿದೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಲಾಕ್‌ಡೌನ್‌ ಅವಧಿಯಲ್ಲಿ ಕಾಯಂ ನೌಕರರಿಗೆ ವೇತನ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮೇ ತಿಂಗಳಿನವರೆಗೆ ವೇತನ ನೀಡಲಾಗಿದೆ. ಜೂನ್‌ನಿಂದ ಗುತ್ತಿಗೆ ನೌಕರರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೌಕರರ ವೇತನಕ್ಕಾಗಿಯೇ ತಿಂಗಳಿಗೆ ₹2 ಕೋಟಿ ಬೇಕು’ ಎಂದು ಅವರು ಮಾಹಿತಿ ನೀಡಿದರು.

‘ತಿಂಗಳಿಗೆ ಪ್ರಾಧಿಕಾರಕ್ಕೆ ಸರಾಸರಿ ₹3 ಕೋಟಿ ಖರ್ಚು ಇದೆ. ಅಭಿವೃದ್ಧಿ ಕಾಮಗಾರಿಗಳ ಬಿಲ್‌ ಕೂಡ ಇರುತ್ತದೆ. ಇದು ಸರಾಸರಿ ₹5 ಕೋಟಿ ಬರುತ್ತದೆ. ದೇವಸ್ಥಾನದಲ್ಲಿ ಆದಾಯ ಇಲ್ಲದೇ ಇದ್ದಾಗ, ಅನಿವಾರ್ಯವಾಗಿ ಸಂಚಿತ ನಿಧಿಯಿಂದ ಹಣ ಬಳಸಬೇಕಾಗುತ್ತದೆ’ ಎಂದು ಜಯವಿಭವ ಸ್ವಾಮಿ ಅವರು ಹೇಳಿದರು.

ಕಳೆದ ವರ್ಷವೂ ಇಳಿಕೆ: ಕೋವಿಡ್‌ ಮೊದಲನೇ ಅಲೆಯಲ್ಲೂ ದೇವಾಲಯದ ಆದಾಯ ಗಣನೀಯವಾಗಿ ಇಳಿಕೆಯಾಗಿತ್ತು. 2020ರ ಡಿಸೆಂಬರ್‌ ನಂತರ ಭಕ್ತರ ಸಂಖ್ಯೆ ಹೆಚ್ಚಳವಾಗಿ ಆದಾಯದಲ್ಲಿ ಚೇತರಿಕೆ ಕಂಡು ಬಂದಿತ್ತು. 2020–21ನೇ ಸಾಲಿನಲ್ಲಿ ಪ್ರಾಧಿಕಾರವು ₹80 ಕೋಟಿಗಳಷ್ಟು ಆದಾಯ ಬರಬಹುದು ಎಂದು ನಿರೀಕ್ಷಿಸಿತ್ತು. ಆದರೆ, ₹42 ಕೋಟಿಗಳಷ್ಟು ಬಂದಿತ್ತು. ₹38 ಕೋಟಿ ಖೋತಾ ಆಗಿತ್ತು.

ಈ ವರ್ಷ ಶಿವರಾತ್ರಿ ಜಾತ್ರೆ ನಡೆದಿದ್ದರೂ ಅದ್ಧೂರಿತನ ಇರಲಿಲ್ಲ. ಭಕ್ತರ ಸಂಖ್ಯೆಗೂ ಮಿತಿ ಹೇರಲಾಗಿತ್ತು. ಏಪ್ರಿಲ್‌ನಿಂದ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದ್ದುದರಿಂದ ಯುಗಾದಿ ಜಾತ್ರೆಯನ್ನು ಸರಳವಾಗಿ ನಡೆಸಲಾಗಿತ್ತು. ರಥೋತ್ಸವವನ್ನು ರದ್ದುಗೊಳಿಸಲಾಗಿತ್ತು.

ಸದ್ಯಕ್ಕೆ ಹೆಚ್ಚಾಗದು ಆದಾಯ

ಸೋಮವಾರದಿಂದ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಸದ್ಯಕ್ಕೆ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗದು. ದೇವರ ದರ್ಶನಕ್ಕೆ ಮಾತ್ರ ಅವಕಾಶ ಇರುವುದರಿಂದ ಭಕ್ತರು ಹುಂಡಿಗೆ ಹಾಕುವ ಕಾಣಿಕೆ ಮಾತ್ರ ಆದಾಯದ ಮೂಲವಾಗಲಿದೆ.

‘ಭಕ್ತರು ಮಾಡುವ ವಿವಿಧ ಸೇವೆಗಳಿಂದ ಹೆಚ್ಚು ಆದಾಯ ಬರುತ್ತದೆ. ಮುಂದಿನ ಆದೇಶದವರೆಗೂ ಅದ್ಯಾವುದೂ ಇರುವುದಿಲ್ಲ. ಹಾಗಾಗಿ, ಆದಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎಂದು ಜಯವಿಭವ ಸ್ವಾಮಿ ಅವರು ಹೇಳಿದರು.

ಹಂತ ಹಂತವಾಗಿ ನೇಮಕ: ‘ಸದ್ಯದ ಮಟ್ಟಿಗೆ, ದಾಸೋಹ, ಲಾಡು ತಯಾರಿಕೆ ಸೇರಿದಂತೆ ಹಲವು ಕೆಲಸಗಳು ಇಲ್ಲದಿರುವುದರಿಂದ ನೌಕರರ ಅಗತ್ಯವಿಲ್ಲ. ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಲಾಗಿರುವ 189 ಮಂದಿ ಗುತ್ತಿಗೆ ಆಧರಿತ ನೌಕರರನ್ನು ತಕ್ಷಣಕ್ಕೆ ವಾಪಸ್‌ ಕರೆಸುವುದಿಲ್ಲ. ದೇವಾಲಯ ಪೂರ್ಣ ಪ್ರಮಾಣದಲ್ಲಿ ತೆರೆದ ನಂತರ ಹಂತ ಹಂತವಾಗಿ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.