ADVERTISEMENT

ಮಾದಪ್ಪನಿಗೆ ಅಮಾವಾಸ್ಯೆ ಪೂಜೆ

ಗುರುವಾರ ರಾತ್ರಿಯೇ ಬೆಟ್ಟಕ್ಕೆ ಬಂದಿದ್ದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 19 ಮೇ 2023, 14:02 IST
Last Updated 19 ಮೇ 2023, 14:02 IST
ಮಾದೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಭಕ್ತಸಾಗರ
ಮಾದೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಭಕ್ತಸಾಗರ   

ಮಹದೇಶ್ವರ ಬೆಟ್ಟ: ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಮಾಯ್ಕಾರ ಮಾದಪ್ಪನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆದಿದ್ದು, ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಾತ್ರಿ ಚಿನ್ನದ ತೇರು ವಿಜೃಂಭಣೆಯಿಂದ ನಡೆಯಿತು.

ಮಹದೇಶ್ವರನ ದೇಗುಲದಲ್ಲಿ ಮುಂಜಾವಿನ 3 ಗಂಟೆಯಿಂದ ನಸುಕಿನ 4 ಗಂಟೆ ತನಕ ಸರದಿ ಅರ್ಚಕರು ವಿಶೇಷ ಪೂಜಾ ಕಾರ್ಯ ನೆರವೇರಿಸಿದರು. ನಂತರ ಸ್ವಾಮಿಗೆ ಅಭಿಷೇಕ ಜರುಗಿತು. 4 ಗಂಟೆಯಿಂದ 6 ಗಂಟೆ ತನಕ ರುದ್ರಾಭಿಷೇಕ, ಬಿಲ್ವಾರ್ಚನೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿದರು. ಬಳಿಕ ನೆರೆದಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿದರು. ಮತ್ತೆ ಸಂಜೆ 6 ಗಂಟೆಗೆ ಅಭಿಷೇಕ ನೆರವೇರಿಸಿ, 6.30ರಿಂದ ರಾತ್ರಿ 8ಗಂಟೆ ತನಕ ರುದ್ರಾಭಿಷೇಕ ಮಾಡಿ, ಮಹಾಮಂಗಳಾರತಿ ಬೆಳಗಿ ನೈವೇದ್ಯ ಅರ್ಪಿಸಿದರು.

ಪ್ರತಿ ದಿನದಂತೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6ಗಂಟೆ ತನಕ ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವ ಜರುಗಿದವು. ದೇವಸ್ಥಾನದ ಗರ್ಭಗುಡಿ ಸಮೀಪದಲ್ಲಿದ್ದ ಚಿನ್ನದ ತೇರು ರಾತ್ರಿ 7ಗಂಟೆಗೆ ಹೊರ ಬರುತ್ತಿದ್ದಂತೆ ನೆರೆದಿದ್ದ ಭಕ್ತರು ಉಘೇ ಮಾದಪ್ಪ, ಉಘೇ ಮಾಯ್ಕಾರ ಎಂದು ಜೈಕಾರ ಮೊಳಗಿಸಿದರು. ಮುದ್ದು ಮಾದೇವನ ನೋಡಿ ಕಣ್ತುಂಬಿಕೊಂಡರು. ಚಿನ್ನದ ತೇರು ದೇವಸ್ಥಾನದ ಸುತ್ತ ಅದ್ಧೂರಿ ಮೆರವಣಿಗೆಯಲ್ಲಿ ಸಾಗಿತು. ಈ ವೇಳೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ಸಲ್ಲಿಸಿದರು.

ADVERTISEMENT

ಬಾದಾಮಿ ಅಮಾವಾಸ್ಯೆ ಪೂಜೆಗಾಗಿ ಗುರುವಾರ ರಾತ್ರಿಯೇ ರಾಜ್ಯದ ವಿವಿಧೆಡೆಯ ಭಕ್ತರು ದೇಗುಲದ ಆವರಣದಲ್ಲಿ ಬಿಡಾರ ಹೂಡಿದ್ದರು. ಶುಕ್ರವಾರ ನಸುಕಿನಿಂದಲೇ ಸರತಿಯಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.

ವಿವಿದ ಉತ್ಸವಾದಿಗಳನ್ನು ನೆರವೇರಿಸಿದ ಭಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.