ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಮಾದಪ್ಪನ ಸನ್ನಿಧಿಯಲ್ಲಿ ಆ.18ರಂದು ಉಚಿತ ಸಾಮೂಹಿಕ ಮಹೋತ್ಸವ ಆಯೋಜಿಸಲಾಗಿದ್ದು, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆಗಳು ಆರಂಭವಾಗಿವೆ. ಜಾತಿ, ಮತ, ಪಂಥ, ಗಡಿಯ ಎಲ್ಲೆ ಮೀರಿ ನಡೆಯುತ್ತಿರುವ ಸಾಮೂಹಿಕ ಮಹೋತ್ಸವದಲ್ಲಿ ಅರ್ಹ ವಧು, ವರರು ಹಸೆಮಣೆ ಏರಲು ಅವಕಾಶ ಕಲ್ಪಿಸಲಾಗಿದೆ.
ಹನೂರು ತಾಲ್ಲೂಕಿನಲ್ಲಿರುವ ಮಾದಪ್ಪನ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿದರೆ ‘ಬದುಕು ಬಂಗಾರ’ವಾಗಲಿದೆ ಎಂಬ ಅಚಲವಾದ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.
ಸಾಮೂಹಿಕ ವಿವಾಹದ ಹಿನ್ನೆಲೆ: ಚಾಮರಾಜನಗರ ಜಿಲ್ಲೆ ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಅದ್ದೂರಿ ವಿವಾಹಗಳಿಂದ ದುಂದುವೆಚ್ಚ ಹಾಗೂ ಸಾಲದ ಹೊರೆ ಹೆಚ್ಚುತ್ತಿದೆ. ಮದುವೆ ಮಾಡುವ ಸಲುವಾಗಿ ಮನೆ, ಜಮೀನು ಮಾರಿಕೊಂಡವರೂ, ಬಡತನದ ಕಾರಣಕ್ಕೆ ಮದುವೆ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿ ಇರುವವರ ಸಂಖ್ಯೆಯೂ ಈ ಭಾಗದಲ್ಲಿ ಹೆಚ್ಚಾಗಿದೆ.
ಮದುವೆ ಎಂಬ ‘ಆರ್ಥಿಕ’ ಹೊರೆ ತಗ್ಗಿಸಲು ಮಾದಪ್ಪನ ಕ್ಷೇತ್ರದಲ್ಲಿ 1989ರಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಆರಂಭಿಸಲಾಯಿತು. ಕೋವಿಡ್–19 ಕಾರಣದಿಂದ 2 ವರ್ಷ ಹೊರತುಪಡಿಸಿ ಇದುವರೆಗೂ ಸಾಂಗವಾಗಿ ನಡೆದುಕೊಂಡು ಬಂದಿದೆ. ಈ ವರ್ಷ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಸಮಾರಂಭ ಆಯೋಜಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಪ್ರಜಾವಾಣಿಗೆ ಮಾಹಿತಿ ನೀಡಿದರು.
ಕಳೆದ 33 ವರ್ಷಗಳಲ್ಲಿ 1,892 ಜೋಡಿಗಳ ವಿವಾಹ ನಡೆದಿದೆ. ಈ ವರ್ಷ ಕನಿಷ್ಠ 101 ಜೋಡಿಗಳ ವಿವಾಹ ಮಾಡುವ ಗುರಿ ಹೊಂದಲಾಗಿದೆ. ನಿರೀಕ್ಷೆಯಂತೆ ನಡೆದರೆ ವಿವಾಹನಗಳ ಸಂಖ್ಯೆ 2,000ದ ಗಡಿ ದಾಟುವ ವಿಶ್ವಾಸವಿದೆ. ಮಾದೇಶ್ವರನ ಬೆಟ್ಟದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನ ಆರಂಭಿಸುವುದು ಶ್ರೇಷ್ಠ ಎಂಬ ಭಾವನೆ ಭಕ್ತರಲ್ಲಿದೆ. ರಾಜ್ಯ ಮಾತ್ರವಲ್ಲ; ತಮಿಳುನಾಡಿನಿಂದಲೂ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುತ್ತಿದ್ದು ಕಳೆದ ವರ್ಷ 8 ಜೋಡಿಗಳು ಹಸೆಮಣೆ ಏರಿವೆ ಎಂದು ರಘು ತಿಳಿಸಿದರು.
ಸಾಮೂಹಿಕ ವಿಹಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲಾಡಳಿತದ ನಿರ್ದೇಶನದಂತೆ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಲು ಸಮಿತಿಗಳನ್ನು ರಚಿಸಲಾಗುತ್ತಿದೆ. ಊಟ, ವಸತಿ, ಉಪಚಾರ ಸಹಿತ ಎಲ್ಲ ವ್ಯವಸ್ಥೆಯನ್ನು ಪ್ರಾಧಿಕಾರ ಮಾಡಲಿದೆ.
ವಧು–ವರರ ಜನನ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ವಯಸ್ಸಿನ ದೃಢೀಕರಣ ಪತ್ರ ಸಲ್ಲಿಸಲು ಸೂಚಿಸಲಾಗಿದೆ. ವಧು ಅಥವಾ ವರ ಈಗಾಗಲೇ ವಿವಾಹವಾಗಿದ್ದರೆ ನ್ಯಾಯಾಲಯದಿಂದ ವಿಚ್ಛೇದನ ಪಡೆದಿರುವ ಬಗ್ಗೆ ತೀರ್ಪಿನ ಪ್ರತಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಎಲ್ಲ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ ಬಳಿಕವೇ ವಿವಾಹಕ್ಕೆ ಅನುಮತಿ ನೀಡಲಾಗುವುದು.
ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು ಆಸಕ್ತರು ಪ್ರಾಧಿಕಾರವನ್ನು ಸಂಪರ್ಕಿಸಿ ಅರ್ಜಿ ಪಡೆದು ಹೆಸರು ನೋಂದಾಯಿಸಿಕೊಂಡು ಸಾಮೂಹಿಕ ವಿವಾಹದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ದಾಖಲಾತಿಗಳು ಕಡ್ಡಾಯ
* ವಧುವಿಗೆ 18 ವರ್ಷ ವರನಿಗೆ 21 ವರ್ಷ ತುಂಬಿರುವ ಬಗ್ಗೆ ದೃಢೀಕರಣ ಪತ್ರ
* ಶಾಲಾ ವರ್ಗಾವಣೆ ಪತ್ರ ಅಥವಾ ಸ್ಥಳೀಯಾಡಳಿತದ ದೃಢೀಕರಣ ಪತ್ರ
* ವಧು ವರರ ಆಧಾರ್ ಕಾರ್ಡ್ ಪ್ರತಿ ಭಾವಚಿತ್ರ
* ಜಾತಿ ಪ್ರಮಾಣ ಪತ್ರ (ಸರ್ಕಾರದ ಅನುದಾನ ಪಡೆಯಲು ಪೂರಕವಾಗಿ)
* ವಿಚ್ಚೇಧಿತ ವಿಚ್ಚೇದಿತೆಯಾಗಿದ್ದರೆ ವಿಚ್ಛೇದನಾ ಪ್ರಮಾಣ ಪತ್ರ ಕಡ್ಡಾಯ
ವಧು ವರನಿಗೆ ಉಡುಗೊರೆ
* ವಧುವಿಗೆ ತಾಳಿ ಕಾಲುಂಗುರ ಸೀರೆ ಕುಬುಸ
* ವರನಿಗೆ ಪಂಚೆ ಶರ್ಟ್ ಶಲ್ಯ ಪೇಟ
* ವಾಸ್ತವ್ಯಕ್ಕೆ ಪ್ರಾಧಿಕಾರದಿಂದ ಉಚಿತ ಕೊಠಡಿ
* ಮದುವೆಯ ದಿನ ವಿಶೇಷ ಭೋಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.