ADVERTISEMENT

ಬಂಡೀಪುರ: ಗಂಡು ಹುಲಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 12:55 IST
Last Updated 9 ಜುಲೈ 2021, 12:55 IST
ಅರಿವಳಿಕೆ ಚುಚ್ಚುಮದ್ದು ಹೊಡೆದಾಗ ಪ್ರಜ್ಞೆ ತಪ್ಪಿದ ಹುಲಿ 
ಅರಿವಳಿಕೆ ಚುಚ್ಚುಮದ್ದು ಹೊಡೆದಾಗ ಪ್ರಜ್ಞೆ ತಪ್ಪಿದ ಹುಲಿ    

ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ನಾಯಳ್ಳ ಗಸ್ತಿನ ಸುತ್ತನಹಳ್ಳಿ ಪ್ರದೇಶದಲ್ಲಿ ಗಂಡು ಹುಲಿಯೊಂದು ಮೃತಪಟ್ಟಿದೆ.

ಹುಲಿಗೆ ನಾಲ್ಕರಿಂದ ಐದು ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬೇರೊಂದು ಹುಲಿಯ ಜೊತೆಗೆ ನಡೆದ ಕಾದಾಟದಲ್ಲಿ ಹುಲಿಯ ಮುಂಭಾಗದ ಎಡಗಾಲು ಹಾಗೂ ಕಣ್ಣಿನ ಭಾಗದಲ್ಲಿ ಗಾಯವಾಗಿರುವುದನ್ನುಗುಂಡ್ರೆ ವಲಯದ ಸಿಬ್ಬಂದಿ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಗುರುವಾರ ಗಮನಿಸಿದ್ದರು. ಇದನ್ನು ಅವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ADVERTISEMENT

ತಕ್ಷಣ ಹುಲಿಯ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೋನನ್ನು ಇರಿಸಲಾಗಿತ್ತು. ಆದರೆ ಹುಲಿ ಬೋನಿಗೆ ಬಿದ್ದಿಲ್ಲ. ಹಾಗಾಗಿ, ಅರಿವಳಿಕೆ ಚುಚ್ಚುಮದ್ದು ನೀಡಿ ಅದನ್ನು ಸೆರೆ ಹಿಡಿಯಲು ಅಧಿಕಾರಿಗಳು ತೀರ್ಮಾನಿಸಿದ್ದರು.

‘ವೈದ್ಯ ವಾಸೀಂ ಮಿರ್ಜಾ ಅವರು ಶುಕ್ರವಾರ ಹುಲಿಗೆ ಅರಿವಳಿಕೆ ಚುಚ್ಚುಮದ್ದು ಹೊಡೆಯಲು ಯಶಸ್ವಿಯಾದರು. ತೀವ್ರವಾಗಿ ಗಾಯಗೊಂಡಿದ್ದ ಹುಲಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಮೃಗಾಲಯಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವನ್ಯಜೀವಿ ವಾರ್ಡನ್‌ಕೃತಿಕ ಆಲನಹಳ್ಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ರವಿಕುಮಾರ್‌, ವಲಯ ಅರಣ್ಯಾಧಿಕಾರಿ ಶಶಿಧರ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.